ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ನಿಧನಕ್ಕೆ ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಮೋದಿ ಕುಟುಂಬಕ್ಕೆ ಆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ. ಮಧ್ಯರಾತ್ರಿ ನಿಧನರಾಗಿರುವ ಹೀರಾಬೆನ್ ಅವರ ತ್ಯಾಗವನ್ನೂ ಹಲವರು ಕೊಂಡಾಡಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ಕಲಾವಿದ ಪ್ರಕಾಶ್ ರೈ, ಬಾಲಿವುಡ್ ನಟಿ ಕಂಗನಾ ರಣಾವತ್, ಸ್ಯಾಂಡಲ್ ವುಡ್ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಸೋನು ಸೂದ್, ಅನುಪಮ್ ಖೇರ್, ಅಜಯ್ ದೇವಗನ್ ಸೇರಿದಂತೆ ಸಾಕಷ್ಟು ಕಲಾವಿದರು ನಿಧನಕ್ಕೆ ಕಂಬನಿ ಮಿಡಿದು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಸಾವು ಪ್ರಕರಣ – ಆರೋಪಿ ಶಿಜಾನ್ ಖಾನ್ ಬೆಂಬಲಕ್ಕೆ ನಿಂತ ಊರ್ಫಿ
ಇಳಿವಯಸ್ಸಿನ ಹೀರಾಬೆನ್ ಮೋದಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊನ್ನೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವತಃ ಮೋದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾಯಿಯ ಆರೋಗ್ಯವನ್ನು ವಿಚಾರಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಹೀರಾಬೆನ್ ಕೊನೆಯುಸಿರು ಬಿಟ್ಟಿದ್ದಾರೆ. ಇಂದು ಅವರ ಅಂತ್ಯಸಂಸ್ಕಾರ ಕೂಡ ನಡೆದಿದೆ.