ಉಡುಪಿ: ತುಳುನಾಡಿನ ಸಂಸ್ಕೃತಿ, ಆಚರಣೆ, ನಂಬಿಕೆಗಳೆಂದರೆ ಬೇರೆಡೆಗಿಂತ ಕೊಂಚ ವಿಭಿನ್ನ. ಉಡುಪಿಯ ಕೆಮ್ತೂರಿನಲ್ಲಿ ವಿಶಿಷ್ಟವಾದ ಜಾತ್ರೆಯೊಂದು ನಡೆಯಿತು. ಇಲ್ಲಿ ಎರಡು ಪಂಗಡಗಳು ಉರಿಯುವ ಪಂಜನ್ನು ಒಬ್ಬರಿಗೊಬ್ಬರು ಎಸೆಯುತ್ತಾರೆ. ಈ ಬೆಂಕಿಯುದ್ಧಕ್ಕೆ ಸ್ವತಃ ದೇವರೇ ಸಾಕ್ಷಿಯಾಗುತ್ತಾರೆ.
Advertisement
ಈ ಫೋಟೋಗಳನ್ನು ನೋಡಿದರೆ ಇದೇನಿದು ಬೆಂಕಿ ಹಿಡಿದುಕೊಂಡು ಯುದ್ಧ ಮಾಡುತ್ತಿದ್ದಾರಾ ಅಂತ ಅನ್ನಿಸಿಬಿಡುತ್ತದೆ. ಉಡುಪಿಯ ಕೆಮ್ತೂರು ಗ್ರಾಮದಲ್ಲಿ ನಡೆಯುವ ವಿಶಿಷ್ಟ ಜಾತ್ರೆ ಇದು. ಇಲ್ಲಿನ ಇತಿಹಾಸ ಪ್ರಸಿದ್ಧ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜಾತ್ರೆ, ಉತ್ಸವ ನಡೆಯುತ್ತದೆ. ಜಾತ್ರೆಯ ಕೊನೆಯ ದಿನ ದೇವರ ಅಭ್ಯಂಜನ ಸ್ನಾನ ಆದ ಕೂಡಲೇ ಕಟ್ಟೆ ಪೂಜೆ ನಡೆಯುತ್ತದೆ. ಕಟ್ಟೆ ಪೂಜೆಯಾದ ಕೂಡಲೇ ಸೂಟೆದಾರೆ ಅಂದ್ರೆ ಪಂಜನ್ನು ಎಸೆಯುವ ಸಂಪ್ರದಾಯ ಶುರುವಾಗುತ್ತದೆ.
Advertisement
Advertisement
ದೇವಸ್ಥಾನದ ಎರಡು ಇಕ್ಕೆಲೆಯ ಜನರ ನಡುವೆ ಈ ಯುದ್ಧ ನಡೆಯುತ್ತದೆ. ಆದ್ರೆ ಇದು ಕೇವಲ ಆಚರಣೆಯಷ್ಟೇ. ಹಿಂದೆ ಎಲ್ಲಾ ದೇವಸ್ಥಾನಗಳಲ್ಲಿ ಇಂತಹ ಆಚರಣೆಯಿತ್ತು. ಆದ್ರೆ ಈಗೀಗ ಇಂತಹ ಹಲವು ಸಂಪ್ರದಾಯಗಳು ನಶಿಸಿಹೋಗಿದೆ. ಆದ್ರೆ ಕೆಮ್ತೂರಿನ ಗದ್ದೆಯಲ್ಲಿ ಇಂದಿಗೂ ಸಂಪ್ರದಾಯ ಉಳಿಸಿಕೊಂಡು ಹೋಗಲಾಗುತ್ತಿದೆ. ಉಡುಪಿಯ ಪೈಕಿ ಈಗ ನಮ್ಮ ಊರಿನಲ್ಲಿ ಈ ತರಹದ ಸಂಪ್ರದಾಯ ಕಾಣಸಿಗುತ್ತದೆ. ಬೇರೆ ಕಡೆಯೂ ಮೊದಲು ಇತ್ತು. ಆದ್ರೆ ಇತ್ತೀಚೆಗೆ ಸಂಪ್ರದಾಯವನ್ನು ಜನರು ಕೈಬಿಡುತ್ತಾ ಹೋಗುತ್ತಿದ್ದಾರೆ. ಆದ್ರೆ ನಾವು ಮಾತ್ರ ನಮ್ಮ ಊರಿನಲ್ಲಿ ಉಳಿಸಿಕೊಂಡಿದ್ದೇವೆ ಎಂಬುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಸ್ಥಳೀಯ ಕೃಷ್ಣ ಜತ್ತನ ಹೇಳಿದ್ದಾರೆ.
Advertisement
ಕೆಮ್ತೂರಿನಲ್ಲಿ ಒಂದು ವಾರ ಜಾತ್ರಾ ಮಹೋತ್ಸವ ನಡೆದ ನಂತರ ಈ ಸೂಟೆದಾರೆ ಸಂಪ್ರದಾಯ ನಡೆಯುತ್ತದೆ. ಆದ್ರೆ ಈ ಆಚರಣೆ ಯಾಕೆ ಶುರುವಾಯ್ತು ಅನ್ನೋದಕ್ಕೆ ಯಾರಿಗೂ ಕಾರಣ ಗೊತ್ತಿಲ್ಲ. ತೆಂಗಿನ ಗರಿಯ ಪಂಜು ಮೈಮೇಲೆ ಬಿದ್ದರೂ ಯಾವುದೇ ಗಾಯ ಆಗುವುದಿಲ್ಲ. ರೋಷದಲ್ಲಿ ಬೆಂಕಿ ಎಸೆಯುತ್ತಿದ್ದಾರೆ ಎಂದು ಅನ್ನಿಸಿದರೂ ಎಲ್ಲರೂ ಅಣ್ಣತಮ್ಮಂದಿರಂತೆ ಇದ್ದೇವೆ ಎಂದು ಸ್ಥಳೀಯ ಸುಂದರ್ ಹೇಳುತ್ತಾರೆ.
ಒಟ್ಟಿನಲ್ಲಿ ಕೆಮ್ತೂರಿನಲ್ಲಿ ನಡೆಯುವ ಈ ಸಂಪ್ರದಾಯಕ್ಕೆ ಇರುವ ಹಿನ್ನೆಲೆ ಬಗ್ಗೆ ಜನರಿಗೆ ಗೊತ್ತಿಲ್ಲ. ಸಂಪ್ರದಾಯ ಮುಂದುವರೆಸುತ್ತೇವೆ ಎಂಬ ಮಾತು ಯುವಕರಿಂದ ಕೇಳಿಬರುತ್ತಿದೆ.