ಲಕ್ನೋ: ಪತಿಯೊಂದಿಗಿನ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಸಿಟ್ಟಾದ ಪತ್ನಿ ತನ್ನ 5 ಮಕ್ಕಳನ್ನು ಗಂಗಾ ನದಿಗೆ ಎಸೆದ ಘಟನೆ ಉತ್ತರ ಪ್ರದೇಶದ ಭಾದೋಹಿಯಲ್ಲಿ ನಡೆದಿದೆ.
ಮಂಜು ಯಾದವ್ ಮಕ್ಕಳನ್ನು ನದಿಗೆ ಎಸೆದಿದ್ದಾಳೆ. ಕಳೆದ 1 ವರ್ಷದಿಂದ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.
ಮಕ್ಕಳನ್ನು ಕೊಲ್ಲುವ ಉದ್ದೇಶದಿಂದಲೇ ಮಂಜು ಯಾದವ್ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆ ಮನೆ ನದಿ ದಡದಲ್ಲೇ ಇದೆ. ಆರಂಭದಲ್ಲಿ ಆರು ಮಂದಿ ನದಿಗೆ ಹಾರಿದ್ದು, ಈಕೆ ಪಾರಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ನಂತರ ಈಕೆಯೇ ಮಕ್ಕಳನ್ನು ನದಿಗೆ ದೂಡಿರುವ ವಿಚಾರ ಖಚಿತವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ
ಶನಿವಾರ ರಾತ್ರಿ ಪತಿ ಮೃದುಲ್ ಯಾದವ್ ಜೊತೆ ಮಂಜು ಜಗಳ ಮಾಡಿಕೊಂಡಿದ್ದಳು. ಭಾನುವಾರ ಮಕ್ಕಳನ್ನು ನದಿಗೆ ಎಸೆದಿದ್ದಾಳೆ. ಮಕ್ಕಳು ಕಿರುಚಿತ್ತಿದ್ದಾಗ ರಕ್ಷಿಸದೇ ಓರ್ವ ಮಹಿಳೆ ಓಡಿ ಪರಾರಿಯಾಗುತ್ತಿದ್ದಳು ಎಂದು ಮೀನುಗಾರರು ಪೊಲೀಸರಿಗೆ ತಿಳಿಸಿದ್ದರು.
ಇಲ್ಲಿಯವರೆಗೆ 11 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಉಳಿದ ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.