ಬೆಂಗಳೂರು: ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಗಲಾಟೆ ಸೇರಿದಂತೆ ಬಿಜೆಪಿಯಲ್ಲಿ ಆಂತರಿಕ ಗೊಂದಲಗಳಿಗೆ 8-10 ದಿನಗಳಲ್ಲಿ ಪರಿಹಾರ ಸಿಗಲಿದೆ ಎಂದು ಮಾಜಿ ಸಚಿವ ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಶ್ರೀರಾಮುಲು-ಜನಾರ್ದನ ರೆಡ್ಡಿ ಮತ್ತು ಯತ್ನಾಳ್-ವಿಜಯೇಂದ್ರ ಕಿತ್ತಾಟ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಗೊಂದಲ, ಅಸಮಾಧಾನ ಆಗ್ತಿರೋದು ಸತ್ಯ. ಬೆಂಕಿ ಇಲ್ಲದೆ ಹೊಗೆ ಆಡೊಲ್ಲ. ಸಣ್ಣಪುಟ್ಟ ಸಮಸ್ಯೆಗಳು ಇವೆ. ಎಲ್ಲವನ್ನು ಹೈಕಮಾಂಡ್ ಸರಿ ಮಾಡುತ್ತಾರೆ. ಶ್ರೀರಾಮುಲು ಮಾತಾಡಿರೋದು ನೋಡಿದ್ದೇನೆ. ಅವರನ್ನ ಹೈಕಮಾಂಡ್ ಕರೆದಿದೆ. ಅವರ ಜೊತೆ ಮಾತಾಡ್ತಾರೆ. ರಾಮುಲು ಪಕ್ಷ ಬಿಟ್ಟು ಹೋಗೊಲ್ಲ. ರಾಮುಲು ವಾಲ್ಮೀಕಿ ಸಮುದಾಯದ ನಾಯಕ. ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ರಾಮುಲು ಪಕ್ಷ ಬಿಟ್ಟು ಹೋಗೊಲ್ಲ. 8-10 ದಿನಗಳಲ್ಲಿ ಎಲ್ಲಾ ಗೊಂದಲ ನಿವಾರಣೆ ಆಗುತ್ತದೆ ಎಂದು ಹೇಳಿದರು.
ಯತ್ನಾಳ್ ಟೀಂ ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೂ ಕೂಡಾ ಉಚ್ಚಾಟನೆ ಆಗಬಾರದು. ಮನುಷ್ಯ ಎಂದ ಮೇಲೆ ತಪ್ಪು ಆಗೋದು ಸಹಜ. ಯತ್ನಾಳ್ ಕೂಡಾ ಮಂತ್ರಿ ಆಗಿದ್ದವರು. ಅನೇಕ ಜವಾಬ್ದಾರಿ ನಿಭಾಯಿಸಿದ್ದಾರೆ. ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದರು. ವಿಜಯೇಂದ್ರ ಕಿರು ವಯಸ್ಸಿನಲ್ಲಿ ಅಧ್ಯಕ್ಷ ಆಗಿರೋದಕ್ಕೆ ವಿರೋಧ ಇರಬಹುದು. ಹೈಕಮಾಂಡ್ ಎಲ್ಲವನ್ನು ಅಳೆದು ತೂಗಿ ಅಧ್ಯಕ್ಷ ಮಾಡಿದ್ದಾರೆ. ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ಪರಿಹಾರ ಮಾಡುತ್ತದೆ ಎಂದರು.
ನಮ್ಮ ಬಿಜೆಪಿಯಲ್ಲಿ ಒಂದು ಸಾರಿ ಅಧ್ಯಕ್ಷ ಆದರೆ 3 ವರ್ಷ ಇರುತ್ತದೆ. ಅದು ಬದಲಾವಣೆ ಆಗೋದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಹೈಕಮಾಂಡ್ ಬಹಳ ಸ್ಟ್ರಾಂಗ್ ಇದೆ. ರಮೇಶ್ ಜಾರಕಿಹೊಳಿ ಒಳ್ಳೆ ನಾಯಕ. ಅವರನ್ನು ಹೈಕಮಾಂಡ್ ನಾಯಕರು ಕರೆದು ಮಾತಾಡ್ತಾರೆ. ಯತ್ನಾಳ್ ಎತ್ತಿ ಕಟ್ಟಿರೋದು ಸಂತೋಷ್ ಜೀ ಅನ್ನೋದು ಸುಳ್ಳು. ಇದರಲ್ಲಿ ಸಂಘ ಪರಿವಾರ ಬರೋದಿಲ್ಲ. ಯತ್ನಾಳ್‌ಗೆ ನಾನು ಸಲಹೆ ಕೊಡುವಷ್ಟು ದೊಡ್ಡವನು ಅಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಬಿಜೆಪಿಯಲ್ಲಿನ ಗೊಂದಲವನ್ನು ಹೈಕಮಾಂಡ್ ನಿವಾರಣೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.