ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.
ವಿಟ್ಲದ ಕನ್ಯಾನ ಎಂಬಲ್ಲಿ ಈ ಘಟನೆ ನಡೆದಿದ್ದು, ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಖುಷಿಯಲ್ಲಿ ಒಂದು ಗುಂಪಿನ ಯುವಕರು ಸಂಭ್ರಮಾಚರಣೆ ನಡೆಸಿದ ವೇಳೆ ಸಂಘರ್ಷ ನಡೆದಿದೆ. ಕನ್ಯಾನ ಕೇರಳ-ಕರ್ನಾಟಕದ ಗಡಿ ಭಾಗವಾಗಿದ್ದು, ಕೇರಳದ ಯುವಕರ ಗುಂಪು ಸಂಭ್ರಮಾಚರಣೆ ನಡೆಸಿರೋದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.
ಘರ್ಷಣೆಯಾದ ಬೆನ್ನಲ್ಲೇ ವಿಟ್ಲ ಪರಿಸರದ ಮೂರು ಕಡೆಗಳಲ್ಲಿ ಗಲಭೆ ಯತ್ನ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪುಗಳನ್ನು ಚದುರಿಸಿದ್ದಾರೆ. ಈ ನಡುವೆಯೇ ವಿಟ್ಲದ ಬಿಜೆಪಿ ಮುಖಂಡನ ಮನೆ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯ ಮೇಲೆ ಕೈ ಹಾಕಿದ್ದಾರೆ. ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತೆ ಲಾಠಿ ಚಾರ್ಜ್ ನಡೆಸಿದ್ದಾರೆ.
ಸದ್ಯ ವಿಟ್ಲ ಪರಿಸರ ಬೂದಿ ಮುಚ್ಚಿದ ಕೆಂಡದಂತಾಗಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಭೇಟಿ ನೀಡಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.