ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್ ಹಾಗೂ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರ ಹೈಡ್ರಾಮಾಕ್ಕೆ ಅಧಿಕಾರಿಗಳು ಇಂದು ಹೈರಾಣಾಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗೌರಿಶಂಕರ್ ಹಾಗೂ ಸುರೇಶ್ ಗೌಡ ಅವರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳ ವಿರುದ್ಧವು ಗುಡುಗಿ, ದೂರು ನೀಡಿದ್ದಾರೆ.
Advertisement
Advertisement
ಬೆಳಗುಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್‍ಗಳಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಕಡಿಮೆ ಮತ ಬಂದಿವೆ. ಹೀಗಾಗಿ ಶಾಸಕ ಗೌರಿಶಂಕರ್ ಅವರು ಬೆಳಗುಂಬ ಬೂತ್ ವ್ಯಾಪ್ತಿಯ ಜನರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಗರ್ ಹುಕುಂನಲ್ಲಿ ಕೆಲವರಿಗೆ ಮಂಜೂರಾದ ಜಮೀನನ್ನು ಶಾಸಕರು ರದ್ದುಪಡಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ.
Advertisement
ಈ ಸಂಬಂಧ ನೂರಾರು ಸಂಖ್ಯೆಯಲ್ಲಿ ಬಗರ್ ಹುಕುಂ ಫಲಾನುಭವಿಗಳ ಜೊತೆಗೆ ಮಾಜಿ ಶಾಸಕ ಸುರೇಶ್ ಗೌಡ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಬಳಿಕ ಶಾಸಕ ಗೌರಿಶಂಕರ್ ವಿರುದ್ಧ ದೂರು ನೀಡಿದರು.
Advertisement
ಸುರೇಶ್ ಗೌಡ ಅವರ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಕಚೇರಿಗೆ ನೂರಾರು ಜನ ಬೆಂಬಲಿಗರೊಂದಿಗೆ ಶಾಸಕ ಗೌರಿಶಂಕರ್ ಆಗಮಿಸಿದರು. ಈ ವೇಳೆ ಶಾಸಕರು, ಸುರೇಶ್ ಗೌಡರ ಅಧಿಕಾರ ಅವಧಿಯಲ್ಲಿ ಬಗರ್ ಹುಕುಂ ಜಮೀನು ಮಂಜೂರು ಮಾಡುವಲ್ಲಿ ಅಕ್ರಮ ನಡೆದಿದೆ. ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಅವರ ಮಧ್ಯೆ ಕಳೆದ ಒಂದು ವರ್ಷದಿಂದಲೂ ಸಣ್ಣಪುಟ್ಟ ವಿಚಾರಕ್ಕೂ ಫೈಟ್ ನಡೆಯುತ್ತಿದೆ. ಇದು ದಿನದಿಂದ ದಿನಕ್ಕೆ ಅತಿರೇಕಕ್ಕೆ ಹೋಗುತ್ತಿದೆ. ಆದರೆ ಹಾಲಿ, ಮಾಜಿಗಳ ಕಿತ್ತಾಟದಿಂದ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.