Connect with us

Bengaluru City

ಖಾತೆ ಹಂಚಿಕೆ ಸಭೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್ ಕಿತ್ತಾಟ!

Published

on

– ಎರಡು ಖಾತೆಗೆ ಪರಂಮೇಶ್ವರ್ ಪಟ್ಟು
– ಒಂದು ಖಾತೆ ಬಿಟ್ಟುಕೊಂಡಿ ಎಂದ ಮಾಜಿ ಸಿಎಂ

ಬೆಂಗಳೂರು: ಖಾತೆ ಹಂಚಿಕೆ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ನಡುವೆ ಮಾತಿ ಚಕಮಕಿ ನಡೆದಿದ್ದು, ಏರು ಧ್ವನಿಯಲ್ಲಿಯಲ್ಲಿ ಕಿತ್ತಾಡಿಕೊಂಡಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಖಾತೆ ಹಂಚಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗಿತ್ತು. ಈ ವೇಳೆ ಏರು ಧ್ವನಿಯಲ್ಲಿ ಪರಸ್ಪರ ಉಭಯ ನಾಯಕರು ಮಾತನಾಡಿದರು. ಇದರಿಂದಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶಾಕ್‍ಗೆ ಒಳಗಾದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ: ಫೈನಲ್ ಆಯ್ತು ಖಾತೆ ಹಂಚಿಕೆ – ಕೊನೆಗೂ ಗೆದ್ದ ಸಿದ್ದರಾಮಯ್ಯ: ಯಾರಿಗೆ ಯಾವ ಖಾತೆ?

ಸಭೆಯಲ್ಲಿ ಏನಾಯ್ತು?
ಬೆಂಗಳೂರು ಅಭಿವೃದ್ಧಿ ಖಾತೆ ಅಥವಾ ಗೃಹ ಖಾತೆ ಎರಡರಲ್ಲಿ ಒಂದನ್ನು ಬಿಟ್ಟು ಕೊಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಜಿ. ಪರಮೇಶ್ವರ್ ಅವರಿಗೆ ತಿಳಿಸಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ, ನೀವು ಹೇಳಿದ್ದೆಲ್ಲಾ ಕೇಳೋಕೆ ಆಗಲ್ಲ. ಎರಡೂ ಖಾತೆ ನನಗೆ ಅಂತ ಮೊದಲೇ ಮಾತುಕತೆಯಾಗಿದೆ. ಹೀಗಾಗಿ ನಾನೇ ಎರಡು ಖಾತೆಯ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎಂದರು.

ಪರಮೇಶ್ವರ್ ಉತ್ತರದಿಂದ ಗರಂ ಆದ ಸಿದ್ದರಾಮಯ್ಯ, ನೀವು ಡಿಸಿಎಂ ರೀ. ಪಕ್ಷದ ಹಿತ ಹಾಗೂ ಸರ್ಕಾರದ ಹಿತ ಎರಡು ಮುಖ್ಯ. ನಿಮಗೆ ಅಷ್ಟು ಅರ್ಥ ಆಗಲ್ವೇನ್ರಿ ಎಂದು ಏರು ಧ್ವನಿಯಲ್ಲಿಯೇ ಹೇಳಿದರು. ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ರೀ ಸ್ವಾಮಿ 8 ವರ್ಷ ಪಕ್ಷದ ಅಧ್ಯಕ್ಷನಾಗಿದ್ದವನು ನಾನು. ಪಕ್ಷದ ಹಿತ ಕಾಯೋದು ಹೇಗೆ ಅಂತ ನನಗೆ ಗೊತ್ತು ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಜಗಳ ನೋಡಿ ಗಾಬರಿಯಾದ ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಮಧ್ಯ ಪ್ರವೇಶಿಸಿ ಸಮಾಧಾನ ಮಾಡಿದರು. ಈ ಸಮಸ್ಯೆಯನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಅವರೇ ತೀರ್ಮಾನ ಮಾಡಲಿ ಎಂದು ಹೇಳಿ ವೇಣುಗೋಪಾಲ್ ಅವರು ಸಭೆಯಿಂದ ಹೊರ ನಡೆದರು.

ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವೇಣುಗೋಪಾಲ್, ನಾಯಕರು ಯಾವುದೇ ರೀತಿಯ ಜಗಳ ಮಾಡಿಕೊಂಡಿಲ್ಲ ಎಂದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಹೈಕಮಾಂಡ್ ಮಾತುಕತೆ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಪರಮೇಶ್ವರ್ ಬಳಿ ಎರಡು ಖಾತೆ ಇರಬೇಕೋ? ಬೇಡವೋ ಎಂದು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಒಂದು ವೇಳೆ ಒಂದು ಖಾತೆಯನ್ನು ಬಿಟ್ಟುಕೊಡಬೇಕು ಎನ್ನುವ ಆದೇಶ ಬಂದರೆ ಒಂದು ಖಾತೆಯನ್ನು ಅವರು ಬಿಟ್ಟುಕೊಡುವ ಪರಿಸ್ಥಿತಿ ಎದುರಾಗಲಿದೆ. ರಾಜ್ಯದಲ್ಲಿ 8 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಪರಮೇಶ್ವರ್ ಅವರ ಕೈಯನ್ನು ಹೈಕಮಾಂಡ್ ಹಿಡಿಯುತಾ? ಅಥವಾ ಸಿದ್ದರಾಮಯ್ಯ ಅವರ ಪಟ್ಟು ಗೆಲ್ಲುತ್ತಾ ಎನ್ನುವುದು ಈಗ ಸದ್ಯದ ಕುತೂಹಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *