ಬೆಂಗಳೂರು: ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಬೆಂಬಲಿಗರ ಬಹಿರಂಗ ಅಸಮಾಧಾನ ಈಗ ಬೀದಿಗೆ ಬಂದಿದೆ. ಎರಡೂ ನಾಯಕರ ಬೆಂಬಲಿಗರ ಮಧ್ಯೆ ಮಾರಾಮಾರಿ ನಡೆದಿದೆ.
ಗುರುವಾರ ಅರಮನೆ ಮೈದಾನದಲ್ಲಿ ಬಿಜೆಪಿ ಸಂಘಟನಾ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ಪರಿಷತ್ ಸದಸ್ಯ ಭಾನುಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡುತ್ತಾ, ಪದಾಧಿಕಾರಿಗಳ ನೇಮಕದಲ್ಲಿ ಅನ್ಯಾಯವಾಗಿದೆ. ಪಕ್ಷದಲ್ಲೇ ಇಲ್ಲದವರು ಜಿಲ್ಲಾಧ್ಯಕ್ಷರಾಗಿದ್ದಾರೆ. ನಮ್ಮ ಅಭಿಪ್ರಾಯವನ್ನು ಮೊದಲೇ ತಿಳಿದಿದ್ದೇವೆ. ಆದರೆ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇವತ್ತಿನ ಸಭೆ ಅತೃಪ್ತರ ಸಭೆನೂ ಅಲ್ಲ. ಇಂದಿನ ಸಭೆ ಭಿನ್ನರ ಸಭೆಯೂ ಅಲ್ಲ. ಬೇರೆ ಪಕ್ಷ ಕಟ್ಟಿದವರೇ ಈಗ ಪಕ್ಷ ಆಳುತ್ತಿದ್ದಾರೆ ಎಂದು ಸಮಾವೇಶದಲ್ಲಿ ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಭಾನುಪ್ರಕಾಶ್ ಭಾಷಣದ ವೇಳೆ ಬಿಎಸ್‍ವೈ ಬೆಂಬಲಿಗರೊಬ್ಬರು, ನೀನು ಅಯೋಗ್ಯ, ಅವರ ಬಗ್ಗೆ ಏಕೆ ಮಾತಾಡ್ತೀಯಾ ಎಂದು ಪ್ರಶ್ನಿಸಿದಾಗ ಈಶ್ವರಪ್ಪ ಬೆಂಬಲಿಗರು ಅವರ ಮೇಲೆ ಹಲ್ಲೆ ನಡೆಸಿದರು. ಬಿಎಸ್‍ವೈ ಬೆಂಬಲಿಗನಿಗೆ ಈಶ್ವರಪ್ಪ ಬೆಂಬಲಿಗರು ಹಿಗ್ಗಾಮುಗ್ಗಾ ಥಳಿಸಿದರು.
Advertisement
ಥಳಿಸಿದ ಬಳಿಕ ಬಿಎಸ್ ವೈ ಬೆಂಬಲಿಗನನ್ನು ಈಶ್ವರಪ್ಪ ಬೆಂಬಲಿಗರು ಹೊರಗೆ ಕಳುಹಿಸಿದರು. ಈ ಗೊಂದಲದಿಂದಾಗಿ ಕೆಲಕಾಲ ಸಮಾವೇಶದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.