ಚಿತ್ರದುರ್ಗ: ಬಿಜೆಪಿ ಬೆಂಬಲಿಸಿದ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮಾಜಿ ಶಾಸಕ ಡಿ.ಸುಧಾಕರ್ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ನಾಗಾನಾಯ್ಕನಹಟ್ಟಿಯಲ್ಲಿ ನಡೆದಿದೆ.
ಹಿರಿಯೂರು ನಗರಸಭೆ ಚುನಾವಣೆಯ ನಾಮಪತ್ರ ಪರಿಶೀಲನೆ ಕಾರ್ಯ ಮುಗಿದಿದ್ದು, ಚುನಾವಣಾ ರಣಕಣ ರಂಗೇರಿದೆ. ಹೀಗಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನವೇ ತಮ್ಮ ತಮ್ಮ ವಾರ್ಡ್ ಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.
Advertisement
Advertisement
29ನೇ ವಾರ್ಡ್‍ನಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿರುವುದನ್ನು ಗಮನಿಸಿರುವ ಮಾಜಿ ಶಾಸಕ ಸುಧಾಕರ್ ಬೆಂಬಲಿಗ, ಜಿಲ್ಲಾ ಪಂಚಾಯತ್ ಸದಸ್ಯ ನಾಗೇಂದ್ರ ನಾಯ್ಕ್ ಸಹೋದರ ಹಾಗೂ ಕೈ ಅಭ್ಯರ್ಥಿ ರವಿಚಂದ್ರ ನಾಯ್ಕ್ ಗೆ ಹಿನ್ನಡೆಯಾಗುವುದೆಂಬ ಭೀತಿ ಹುಟ್ಟಿದೆ. ಹೀಗಾಗಿ ತಮ್ಮ ಬೆಂಬಲಿಗರೊಂದಿಗೆ ಭಾನುವಾರ ತಡರಾತ್ರಿ ನಾಗಾನಾಯ್ಕ್ ನಟ್ಟಿಯಲ್ಲಿರುವ ಬಿಜೆಪಿ ಕಾರ್ಯಕರ್ತ ಸಂತೋಷ್‍ನಾಯ್ಕ್ ರ ಮನೆಗೆ ನುಗ್ಗಿ ಬಿಜೆಪಿ ಬೆಂಬಲಿಸದಂತೆ ಧಮ್ಕಿ ಹಾಕಿ ದಾಂಧಲೆ ಎಬ್ಬಿಸಿದ್ದಾರೆ ಎಂದು ಆರೋಪಿಸಲಾಗಿದೆ.
Advertisement
Advertisement
ಈ ವೇಳೆ ಎರಡು ಗುಂಪಿನ ನಡುವೆ ಪರಸ್ಪರ ಮಾತಿನ ಚಕಮಕಿ ಹಾಗೂ ಮಾರಾಮಾರಿ ನಡೆದಿದೆ. ಸಂತೋಷ್ ನಾಯ್ಕ್ ಅವರ ಕುಟುಂಬದ ನಾಲ್ವರು ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಿಂದಾಗಿ ಸಂತೋಷ್ ನಾಯ್ಕ್ ಗೆ ತಲೆ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.
ಹಿರಿಯೂರು ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಗರಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವುದು ಮತದಾರರಲ್ಲಿ ಆತಂಕ ಸೃಷ್ಟಿಸಿದೆ.