ಗದಗ: ಹೋಳಿ ಹುಣ್ಣಿಮೆ ನಿಮಿತ್ಯ ಕಾಮಣ್ಣ ಸುಡುವ ಆಚರಣೆ ವಿಚಾರದಲ್ಲಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಗಲಾಟೆಯಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ.
ಈ ಬಾರಿ ಯಳವತ್ತಿ ಗ್ರಾಮದ ಎಸ್.ಸಿ. ಒಂದೇ ಕಾಲೋನಿಯಲ್ಲಿ ಎರಡು ಕಡೆ ಕಾಮಣ್ಣ ಸುಡುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ತಡರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆಯಿತು. ಇದಕ್ಕೆ ಮತ್ತೊಂದು ಬಲವಾದ ಕಾರಣ 2017 ಡಿಸೆಂಬರ್ 26 ರಂದು ನಡೆದ ಬೈ ಎಲೆಕ್ಷನ್‍ನ ಹಳೆ ವೈಷ್ಯಮ್ಯವೇ ಈ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ.
ಪಕೀರಪ್ಪ ಜಿನಗಿ ಹಾಗೂ ಬಸವಣ್ಣೆಪ್ಪ ಜಿನಗಿ ನಡುವೆ ಗ್ರಾ.ಪಂ ಸದಸ್ಯತ್ವದ ಚುನಾವಣೆ ನಡೆದಿತ್ತು. ಇದರಲ್ಲಿ ಪಕೀರಪ್ಪ ಕೇವಲ ಆರು ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಈ ಹಳೆ ವೈಷ್ಯಮ್ಯದಿಂದ ಇಂದು ಕಾಮಣ್ಣನ ನೆಪದಲ್ಲಿ ಪಕೀರಪ್ಪ ಜಿನಗಿ ಎಂಬ ಗ್ರಾ.ಪಂ ಸದಸ್ಯನ ಕುಟುಂಬದ ಮೇಲೆ ಸ್ಥಳೀಯ ಬಸವಣ್ಣೆಪ್ಪ ಬೆಂಬಲಿಗರು ಹಲ್ಲೆ ಮಾಡಿರೊದಾಗಿ ಆರೋಪ ಕೇಳಿಬರುತ್ತಿದೆ.
ಈ ಗಲಾಟೆಯಲ್ಲಿ ನಾಲ್ವರಿಗೆ ಗಾಯ ಹಾಗೂ ಸಾವಕ್ಕೆ ಎಂಬ ಓರ್ವ ಮಹಿಳೆಗೆ ತಲೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮತ್ತೊರ್ವ ವಿಕಲಾಂಗ ಚೇತನ ಮಹಿಳೆ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಗಾಯಾಳುಗಳನ್ನ ಯಳವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿರಹಟ್ಟಿ ತಾಲೂಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಣ್ಣಪ್ಪ, ಚಂದ್ರು, ಮೈಲಾರಪ್ಪ ನಿಂಗಪ್ಪ, ಬಂಡೆಪ್ಪ, ಯಲ್ಲಪ್ಪ ಹೀಗೆ ಸುಮಾರು 10ಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಾಗಿದೆ. ಸ್ಥಳಕ್ಕೆ ಶಿರಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.