ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

Public TV
3 Min Read
Football

ಪಿಎಲ್‌ ಭ್ರಷ್ಟಾಚಾರದಿಂದ ಭಾರತ ಈ ಹಿಂದೆ ಸುದ್ದಿಯಾಗಿತ್ತು. ಈಗ ಫುಟ್‌ಬಾಲ್‌ನಿಂದ ಮತ್ತೆ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದೆ. ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ (ಫಿಫಾ) ಭಾರತೀಯ ಫುಟ್ಬಾಲ್ ಫೆಡರೇಶನ್ ಸಂಸ್ಥೆಯನ್ನು(ಎಐಎಫ್‌ಎಫ್‌) ಅಮಾನುತು ಮಾಡಿದೆ. ಭಾರತವನ್ನು ಫಿಫಾ ಅಮಾನತು ಮಾಡಿದ್ದು ಯಾಕೆ ಎಂಬುದರ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

ಕ್ರೀಡಾ ಸಚಿವಾಲಯ ವ್ಯಾಪ್ತಿಯ ಅಡಿಯಲ್ಲಿ ಭಾರತೀಯ ಫುಟ್ಬಾಲ್ ಫೆಡರೇಶನ್ ಕೆಲಸ ಮಾಡುತ್ತಿದ್ದು ಇದರ ಅಧ್ಯಕ್ಷ ಸ್ಥಾನವನ್ನು ಎನ್‌ಸಿಪಿ ರಾಜ್ಯಸಭಾ ಸದಸ್ಯ ಪ್ರಫುಲ್‌ ಪಟೇಲ್‌ 2009 ರಿಂದ ಅಲಂಕರಿಸಿದ್ದಾರೆ. ಪ್ರಫುಲ್‌ ಪಟೇಲ್‌ ಈಗಾಗಲೇ 4 ವರ್ಷ ಅಧ್ಯಕ್ಷರಾಗಿದ್ದು ರಾಷ್ಟ್ರೀಯ ಕ್ರೀಡಾ ಸಂಹಿತೆಯ(ಎನ್‌ಎಸ್‌ಸಿ) ಪ್ರಕಾರ ಮತ್ತೆ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ. ಎನ್‌ಎಸ್‌ಸಿ ಪ್ರಕಾರ ಗರಿಷ್ಠ 12 ವರ್ಷದವರೆಗೆ ಮಾತ್ರ ಅಧ್ಯಕ್ಷರಾಗಲು ಮಾತ್ರ ಅವಕಾಶವಿದೆ. ಆದರೆ ಪ್ರಫುಲ್ ಪಟೇಲ್ ಅವರು ಹೊಸ ಚುನಾವಣೆಗಳನ್ನು ನಡೆಸದೆಯೇ ಅಧಿಕಾರದಲ್ಲಿ ಮುಂದುವರಿದ್ದರು.

praful patel footbal

ಮೇ 18 ರಂದು ಸುಪ್ರೀಂ ಕೋರ್ಟ್ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ವಿಸರ್ಜಿಸಿತು ಮತ್ತು ದೇಶದಲ್ಲಿ ಫುಟ್‌ಬಾಲ್‌ ಕ್ರೀಡೆಯನ್ನು ನಿಯಂತ್ರಿಸಲು ಮೂರು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿ(CoA) ನೇಮಿಸಿತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಎಆರ್ ದವೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಮತ್ತು ಭಾರತೀಯ ಪುರುಷರ ಫುಟ್ಬಾಲ್ ತಂಡದ ಮಾಜಿ ನಾಯಕ ಭಾಸ್ಕರ್ ಗಂಗೂಲಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿತು. ಈ ಸಮಿತಿ ಸಭೆಗಳನ್ನು ನಡೆಸಿ 12 ಪರಿಚಿತ ಮುಖಗಳನ್ನು ಒಳಗೊಂಡ ಸಲಹಾ ಮಂಡಳಿಯನ್ನು ಸ್ಥಾಪಿಸಿತು. ಇದನ್ನೂ ಓದಿ: ಮೋದಿ, ಶಾ ಜೊತೆ ಗಂಗೂಲಿ ಚರ್ಚೆ – ರಾಜಕೀಯ ಇನ್ನಿಂಗ್ಸ್‌ ಆಡ್ತಾರಾ ದಾದಾ?

ಯಾವಾಗ ಆಡಳಿತಾಧಿಕಾರಿಗಳ ಸಮಿತಿ ಸಲಹಾ ಸಮಿತಿಯನ್ನು ಸ್ಥಾಪಿಸಿತ್ತೋ ಆವಾಗ ಸಮಸ್ಯೆ ಆರಂಭವಾಯಿತು. ಯಾಕೆಂದರೆ ಫಿಫಾ ತನ್ನ ಎಲ್ಲ ವ್ಯವಹಾರವನ್ನು ದೇಶಗಳ ಫುಟ್‌ಬಾಲ್‌ ಆಡಳಿತ ಮಂಡಳಿ ಜೊತೆ ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಫಿಫಾ ಎಐಎಫ್‌ಎಫ್‌ಗೆ ಕೂಡಲೇ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಎಐಎಫ್‌ಎಫ್‌ನಲ್ಲಿ ಸೃಷ್ಟಿಯಾಗಿರುವ ಗೊಂದಲ ಬಗೆಹರಿಸಲು ಫಿಫಾ ಮತ್ತು ಏಷ್ಯನ್‌ ಫುಟ್‌ಬಾಲ್‌ ಒಕ್ಕೂಟ(ಎಎಫ್‌ಸಿ) ಜೂನ್‌ನಲ್ಲಿ ಗಡುವು ನೀಡಿತ್ತು. ಎಐಎಫ್‌ಎಫ್‌ಗೆ ಹೊಸದಾಗಿ ನಿಯಮಾವಳಿ ರೂಪಿಸಿ, ಜುಲೈ 31ರ ಒಳಗೆ ಅನುಮೋದನೆ ನೀಡಬೇಕು. ಸೆ.15ರ ಒಳಗಾಗಿ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಬೇಕು ಎಂದು ಫಿಫಾ ಸೂಚಿಸಿತ್ತು.

SUPREME COURT 1

ಈ ಡೆಡ್‌ಲೈನ್‌ ನೀಡಿದ ಬೆನ್ನಲ್ಲೇ ಪ್ರಫುಲ್‌ ಪಟೇಲ್‌ ಅವರು ದೇಶದ 35 ಫುಟ್‌ಬಾಲ್‌ ಸದಸ್ಯ ಸಂಘಗಳೊಂದಿಗೆ ಸಭೆ ನಡೆಸಿದ್ದರು. ಸಭೆ ನಡೆಸಿದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ಭಾರತದಲ್ಲಿ ನಿಗದಿಯಾಗಿರುವ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್‌ಗೆ ಸಮಸ್ಯೆ ಮಾಡಲೆಂದೇ ಈ ಸಭೆ ನಡೆಸಿದ್ದಾರೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ನ್ಯಾ ಡಿ.ವೈ.ಚಂದ್ರಚೂಡ್‌, ನ್ಯಾ. ಸೂರ್ಯಕಾಂತ್‌ ಮತ್ತು ನ್ಯಾ. ಎ.ಎಸ್‌. ಬೋಪಣ್ಣ ಅವರಿದ್ದ ಪೀಠದಲ್ಲಿ ಈ ಅರ್ಜಿ ಇದ್ದು ವಿಚಾರಣೆ ನಡೆಸಬೇಕಿದೆ.

ಅಮಾನತುಗೊಂಡಿದ್ದು ಯಾಕೆ?
ತಾನು ನೀಡಿದ ಡೆಡ್‌ಲೈನ್‌ ಒಳಗಡೆ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ಭಾರತೀಯ ಫುಟ್ಬಾಲ್ ಫೆಡರೇಶನ್ ಸಂಸ್ಥೆಯನ್ನು ಫಿಫಾ ಅಮಾನತುಗೊಳಿಸಿದೆ. ಫೆಡರೇಶನ್‌ನಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ, ಪ್ರಭಾವ ಆರೋಪದ ಮೇಲೆ ಫಿಫಾ ಈ ಕ್ರಮ ಕೈಗೊಂಡಿದೆ. ಇದು ತನ್ನ ಕಾನೂನುಗಳ ಗಂಭೀರ ಉಲ್ಲಂಘನೆ ಎಂದಿರುವ ಫಿಫಾ ಎಐಎಫ್‌ಎಫ್ ತನ್ನ ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆಯುವವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ಹೇಳಿದೆ. ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ಈ ಹಿಂದೆಯೂ ಹಲವು ದೇಶಗಳ ಸಂಸ್ಥೆಯನ್ನು ಫಿಫಾ ಅಮಾನುತು ಮಾಡಿತ್ತು.

Football FIFA

ಪಂದ್ಯ ನಡೆಯುತ್ತಾ?
2020ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್ ಪಂದ್ಯಾವಳಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಈ ಬಾರಿ ಅಕ್ಟೋಬರ್ 11 ರಿಂದ 30ರ ವರೆಗೆ ಭಾರತದಲ್ಲಿ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಫಿಫಾ ಎಐಎಫ್‌ಎಫ್ ಅನ್ನು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಮುಂದೇನು ಎಂಬ ಪ್ರಶ್ನೆ ಎದ್ದಿದೆ.

ಮಂದೇನು?
ಭಾರತದ ಕ್ರೀಡಾ ಸಂಸ್ಥೆಗಳಲ್ಲಿ ರಾಜಕೀಯ ಲಾಬಿಗಳು ಹೆಚ್ಚಿರುವುದು ಎಲ್ಲರಿಗೂ ತಿಳಿದ ವಿಚಾರ. ಐಪಿಎಲ್‌ನಲ್ಲಿ ಭಾರೀ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಿ ಪಾರದರ್ಶನ ವ್ಯವಸ್ಥೆ ರೂಪಿಸಿತ್ತು. ಈಗ ಫುಟ್‌ಬಾಲ್‌ ಕಿತ್ತಾಟ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸುಪ್ರೀಂ ನೀಡುವ ಮುಂದಿನ ಆದೇಶದ ಮೇಲೆ ಭಾರತದಲ್ಲಿ ಫುಟ್‌ಬಾಲ್‌ ಪಂದ್ಯದ ಭವಿಷ್ಯ ನಿರ್ಧಾರವಾಗಿದೆ. ಅಮಾತು ನಿರ್ಧಾರ ತೆಗೆಯುವವರೆಗೆ ಫಿಫಾ ಆಯೋಜಿಸುವ ಟೂರ್ನಿಯಲ್ಲಿ  ಭಾರತ ತಂಡ ಆಡುವ ಅವಕಾಶವನ್ನು ಕಳೆದುಕೊಳ್ಳಲಿದೆ.

ಅಪ್‌ಡೇಟ್‌ ಸುದ್ದಿ: ಫಿಫಾ ಅಮಾನತುಗೊಳಿಸಿದ ವಿಚಾರವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಿದೆ. ನ್ಯಾ.ಚಂದ್ರಚೂಡ್‌ ನೇತೃತ್ವದ ಪೀಠ ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *