ಬೆಂಗಳೂರು: ಕಾಂಗ್ರೆಸ್‌ನಲ್ಲಿ ಉತ್ತರಾಧಿಕಾರತ್ವ ಸಮರ ತಾರಕಕ್ಕೇರಿದೆ. ಮಾತನಾಡಲ್ಲ ಎನ್ನುತ್ತಲೇ ಯತೀಂದ್ರಗೆ (Yathindra Siddaramaiah) ಶಿಸ್ತಿನ ಪಾಠ ಮಾಡಿದ್ದಾರೆ ಡಿಕೆಶಿ. ಈಗಲೂ ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ ಎನ್ನುವ ಮೂಲಕ ಚದುರಂಗದಾಟ ಶುರು ಆಗಿದೆ. ಹಾಗಾದ್ರೆ ಯತೀಂದ್ರ ವಿರುದ್ಧ ಶಿಸ್ತುಕ್ರಮವೋ..? ಎಚ್ಚರಿಕೆಯ ಆಟವೋ.? ಇನ್ನಷ್ಟೇ ಕಾದುನೋಡಬೇಕಿದೆ.
ಕಾಂಗ್ರೆಸ್ ಕುಲುಮೆಯಲ್ಲೀಗ ಕಾದ ಕಬ್ಬಿಣ್ಣಕ್ಕೆ ಸಿಕ್ಕ ಸಿಕ್ಕವರ ಬಡಿತ ಜೋರಾಗಿದೆ. ಬದಲಿ ನಾಯಕತ್ವ ಜಟಾಪಟಿಗೆ ಉತ್ತರ ಸಿಗುವ ಮುನ್ನವೇ ಉತ್ತರಾಧಿಕಾರತ್ವ ಪ್ರಸ್ತಾಪ ಬಿಸಿಯೇರಿಸಿದೆ. ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿ (Satish Jarkiholi) ಸಮರ್ಥ ನಾಯಕತ್ವದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಕೊಟ್ಟ ಹೇಳಿಕೆಯನ್ನ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗ್ತಿದೆ. ಡಿಕೆಶಿ ಬಣದ ಬೆಂಬಲಿಗ ಶಾಸಕರಾದ ಶಿವಗಂಗಾ, ಇಕ್ಬಾಲ್ ಹುಸೇನ್ ಯತೀಂದ್ರಗೆ ಶಿಸ್ತಿನ ಗೆರೆ ಏಕಿಲ್ಲ ಎಂದು ಬಹಿರಂಗವಾಗಿ ಪ್ರಶ್ನಿಸಿ ಅಖಾಡವನ್ನ ರೋಚಕಗೊಳಿಸಿದ್ದಾರೆ. ಈ ನಡುವೆ ಯತೀಂದ್ರ ವಿರುದ್ಧ ಶಿಸ್ತು ಕ್ರಮಕ್ಕೆ ಬೆಂಬಲಿಗ ಶಾಸಕರ ಆಗ್ರಹಕ್ಕೆ ಡಿಕೆಶಿ ಪರೋಕ್ಷ ಬೆಂಬಲ ನೀಡಿದ್ದಾರೆ.
ಹೈಕಮಾಂಡ್‌ಗೆ ಕೆಪಿಸಿಸಿ ವರದಿ ರವಾನೆ; ಸಿಡಿದ ಡಿಕೆ
ಇನ್ನು, ಉತ್ತರಾಧಿಕಾರ ಬಗ್ಗೆ ಯತೀಂದ್ರ ನೀಡಿದ್ದ ಹೇಳಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಕೆಪಿಸಿಸಿ ವರದಿ (KPCC Report) ರವಾನಿಸಿದೆ. ಯತೀಂದ್ರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಬೆಂಬಲಿಗರು ಆಡಿರೋ ಮಾತನ್ನು ಡಿಕೆಶಿ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ನನ್ನ ಪಕ್ಷದ ಆದ್ಯತೆ ಶಿಸ್ತು ಎನ್ನುವ ಮೂಲಕ ಯತೀಂದ್ರಗೆ ಡಿಕೆಶಿ (DK Shivakumar) ಪರೋಕ್ಷ ಗುನ್ನಾ ಕೊಟ್ಟಿದ್ದಾರೆ. ಈ ಬಗ್ಗೆ ನಾನು ಈಗ ಮಾತನಾಡಲ್ಲ. ಯಾರ ಹತ್ತಿರ.. ಏನು ಮಾತನಾಡಬೇಕೋ.. ಅಲ್ಲಿ ಮಾತನಾಡುತ್ತೇನೆ. ನಾನು ಶಿಸ್ತಿನ ಜೊತೆ ನಿಲ್ಲುತ್ತೇನೆ. ಶಿಸ್ತು ನನ್ನ ಪಕ್ಷದ ಆದ್ಯತೆ ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಉತ್ತರಾಧಿಕಾರ ಹೇಳಿಕೆಗೆ ಸಿಎಂ ಮೌನ
ಇನ್ನು ಪುತ್ರ ಯತೀಂದ್ರ ಉತ್ತರಾಧಿಕಾರತ್ವದ ಬಗ್ಗೆ ಇಷ್ಟೆಲ್ಲ ಮಾತನಾಡಿದ್ರೂ ಸಿಎಂ ಮಾತ್ರ ಇನ್ನೂ ಮೌನ. ಕಾಂಗ್ರೆಸ್ ಒಳಗೆ ಇಷ್ಟೆಲ್ಲ ಬೆಳವಣಿಗೆ ಆಗ್ತಿದ್ರೂ ಸಿಎಂ ಅಂತರ ಕಾಯ್ದುಕೊಂಡಿದ್ದು ಏಕೆ ಎಂಬ ಚರ್ಚೆ ಶುರುವಾಗಿದೆ. ಸಿಎಂ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದು, ಎಲ್ಲವನ್ನೂ ನೋಡಿ ಕಡೆಗಳಿಗೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗ್ತರಾ? ಎಂಬುದನ್ನ ಕಾದುನೋಡಬೇಕಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಯತೀಂದ್ರ ಹೇಳಿಕೆಯನ್ನ ಸಮರ್ಥಿಸಿಕೊಂಡ್ರೂ ಸಿಎಂ ಬದಲಾವಣೆ ತೀರ್ಮಾನ ಹೈಕಮಾಂಡ್ ಎಂದು ಮೇಲೆ ಕೈ ತೋರಿಸಿ ಜಾರಿಕೊಂಡಿದ್ದಾರೆ.
ಬಿಹಾರ ಎಲೆಕ್ಷನ್ ಬಳಿಕ ಕ್ರಾಂತಿನಾ?
ಈ ಮಧ್ಯೆ, ನವೆಂಬರ್ ಕ್ರಾಂತಿಯ ಬಗ್ಗೆ ರಾಜಣ್ಣ ಪುತ್ರ ರಾಜೇಂದ್ರ ಮತ್ತೆ ಮಾತನಾಡಿದ್ದಾರೆ. ಯತೀಂದ್ರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಮುಂದೆ ಅಹಿಂದ ನಾಯಕ ಮುಖ್ಯಮಂತ್ರಿ ಆಗಬೇಕು ಅಂತ ಹೇಳಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಬಿಹಾರ ಎಲೆಕ್ಷನ್ ನಂತರ ಕೆಲವೊಂದು ಬದಲಾವಣೆಗಳು ಆಗ್ತವೆ ನೋಡ್ತೀರಿ ಅಂತ ಮೇಲ್ಮನೆ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿದ್ದಾರೆ.

