ಮೈಸೂರು: ಭ್ರೂಣ ಲಿಂಗ ಪತ್ತೆ ಪ್ರಕರಣದಲ್ಲಿ (Fetal Sex Determination) ಸ್ಫೋಟಕ ವಿಚಾರ ಬಹಿರಂಗವಾಗಿದ್ದು, ಖಾಸಗಿ ಆಸ್ಪತ್ರೆ ಮಾಲಕಿಯೇ ಈ ದಂಧೆಯ ಕಿಂಗ್‌ಪಿನ್ ಎಂಬುದು ಗೊತ್ತಾಗಿದೆ.
ಬನ್ನೂರಿನ ಎಸ್.ಕೆ. ಆಸ್ಪತ್ರೆ ಮಾಲಕಿ ಶ್ಯಾಮಲಾ ಈ ಕೃತ್ಯದ ಕಿಂಗ್‌ಪಿನ್. ಶ್ಯಾಮಲಾ ತಮ್ಮ ಗೋವಿಂದರಾಜು ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದ. ಏಜೆಂಟ್ ಪುಟ್ಟರಾಜು ಮೂಲಕ ಗಿರಾಕಿಗಳನ್ನು ಸ್ಕ್ಯಾನಿಂಗ್ ಕೇಂದ್ರಕ್ಕೆ ಕರೆಸುತ್ತಿದ್ದರು. ಇದನ್ನೂ ಓದಿ: ತಾಯಿ ಬಳಿ ಮಲಗಿದ್ದ ಗಂಡು ಮಗು ಕಳ್ಳತನ – ಮಹಿಳೆ ಬಂಧನ
ಈಗ ಪ್ರಕರಣದಲ್ಲಿ ಸಾಲಿಗ್ರಾಮ ತಾಲೂಕಿನ ಬೇರ್ಯ ಮೂಲದ ಶಿವಕುಮಾರ್, ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದ ಹರೀಶ್ ವಶಕ್ಕೆ ಪಡೆಯಲಾಗಿದೆ. ಮಧ್ಯವರ್ತಿ ಪುಟ್ಟರಾಜು ಎಸ್ಕೇಪ್ ಆಗಿದ್ದಾನೆ. ಒಂದು ಭ್ರೂಣಪತ್ತೆಗೆ 25 ರಿಂದ 35 ಸಾವಿರ ಚಾರ್ಜ್ ಮಾಡಲಾಗುತ್ತಿತ್ತು. ಆಸ್ಪತ್ರೆಯಿಂದ ಕಾರಿನಲ್ಲಿ ಸ್ಕ್ಯಾನಿಂಗ್ ಮಿಷಿನ್ ತಂದು ಭ್ರೂಣ ಪತ್ತೆ ಮಾಡಲಾಗುತ್ತಿತ್ತು. ಶ್ಯಾಮಲಾ ಮನೆಯಲ್ಲಿಯೇ ಸ್ಕ್ಯಾನಿಂಗ್ ಮಿಷಿನ್ ಕೂಡ ಇತ್ತು.
ತಿ.ನರಸೀಪುರ ತಾಲೂಕಿನ ಬನ್ನೂರು ಹೈವೇ ಬಳಿ ಲಿಂಗ ಭ್ರೂಣ ಪತ್ತೆ ನಡೆಸುತ್ತಿದ್ದ ಕೇಂದ್ರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾಳಿ ಮಾಡಿದೆ. ಬನ್ನೂರು ಹೈವೇಗೆ ಬಳಿಯ ಹುಣಗನಹಳ್ಳಿ ವ್ಯಾಪ್ತಿಯ ಫಾರಂ ಹೌಸ್ ಒಂದರಲ್ಲಿ ಲಿಂಗ ಭ್ರೂಣ ಪತ್ತೆ ಮಾಡಲಾಗುತ್ತಿತ್ತು. ದಾಳಿ ವೇಳೆ 4 ಗರ್ಭಿಣಿಯರು ಭ್ರೂಣ ಲಿಂಗ ಪತ್ತೆಗೆ ಹಾಜರಿದ್ದರು. ಈ ಕೇಂದ್ರದಲ್ಲಿ ಸ್ಕ್ಯಾನಿಂಗ್ ಬಳಕೆ ಮಾಡುವ ಉಪಕರಣವು ಇತ್ತು. ಈ ಹಿನ್ನೆಲೆಯಲ್ಲಿ ಹೆರಿಗೆ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸಿಎಂ ಉತ್ತರಾಧಿಕಾರಿನಾ? – ಪರ್ಯಾಯ ನಾಯಕತ್ವದ ದಾಳ ಉರುಳಿಸಿದ ಯತೀಂದ್ರ
ಭ್ರೂಣ ಲಿಂಗ ಪತ್ತೆ ಕೇಂದ್ರದ ಮೇಲೆ ದಾಳಿ ನಡೆಸಿದ್ದು, ಐವರನ್ನು ಬಂಧಿಸಲಾಗಿದೆ. ಈ ಕುರಿತು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಸ್ಕ್ಯಾನಿಂಗ್‌ಗೆ ಬರುವ ಗರ್ಭಿಣಿಯರನ್ನು ಮಾನಿಟರ್ ಮಾಡುವ ಮೂಲಕ ಈ ಕಾರ್ಯಾಚರಣೆ ಮಾಡಿದ್ದೇವೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ 5 ಜನರನ್ನು ಬಂಧಿಸಲಾಗಿದೆ. ದಾಳಿ ಮಾಡಿದ ವೇಳೆ ಇಬ್ಬರು ಗರ್ಭಿಣಿಯರು ಸ್ಕ್ಯಾನಿಂಗ್‌ಗೆ ಬಂದಿದ್ದರು. ಅವರ ಪೋಷಕರ ವಿರುದ್ಧವೂ ಕೇಸ್ ದಾಖಲಿಸಿದ್ದೇವೆ. ನರ್ಸ್ ಒಬ್ಬರ ಮುಂದಾಳತ್ವದಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಆಕೆ ಬನ್ನೂರಿನ ಎಸ್.ಕೆ. ಆಸ್ಪತ್ರೆ ಉದ್ಯೋಗಿ. ರೇಡ್ ನಡೆದ ಜಾಗದಲ್ಲಿ ಎಷ್ಟು ದಿನಗಳಿಂದ ಭ್ರೂಣ ಪತ್ತೆ ನಡೆಯುತ್ತಿತ್ತು. ಇಲ್ಲಿಯವರೆಗೆ ಎಷ್ಟು ಭ್ರೂಣ ಹತ್ಯೆ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.