ಭೋಪಾಲ್: ದಿನಗೂಲಿ ನೀಡಲಿಲ್ಲ ಎಂದು ರೈತ ಮಹಿಳೆಯರು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾವಚಿತ್ರವನ್ನು ಫುಟ್‍ಬಾಲ್ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.
ಖಾಂಡ್ವಾ ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದಕರು ಕಳೆದ 7 ದಿನದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ಮಹಿಳೆಯರು ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣಾ ರೋಜ್‍ಗಾರ್ ಗ್ಯಾರಂಟಿ ಯೋಜನೆ ಅಡಿಯಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಕೆಲಸ ಮಾಡಿದ್ದು, ಆ ಕೆಲಸಕ್ಕೆ ಇದುವರೆಗೂ ದಿನಗೂಲಿ ನೀಡಲಿಲ್ಲ ಎಂದು ಮಹಿಳಯರು ಆರೋಪಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಜುಲೈ 9 ರಂದು ಮಹಿಳೆಯರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಫೋಟೋವನ್ನು ಫುಟ್‍ಬಾಲ್‍ಗೆ ಅಂಟಿಸಿ ಆಟವಾಡಿದ್ದಾರೆ. “ಸರ್ಕಾರ ಸಾಮಾನ್ಯ ಜನರನ್ನು ಫುಟ್‍ಬಾಲ್ ಮಾಡಿ ಅವರನ್ನು ಕಾಲಿನಿಂದ ಒದ್ದಿದ್ದಾರೆ. ಅವರಂತೆಯೇ ನಾವು ಕೂಡ ಚುನಾವಣೆಯಲ್ಲಿ ಅವರನ್ನು ಫುಟ್‍ಬಾಲ್ ನಂತೆ ಒದೆಯುತ್ತೇವೆ” ಎಂದು ಮಹಿಳೆಯರು ಹೇಳಿದ್ದಾರೆ.
ಮಹಿಳೆಯರು ಫುಟ್‍ಬಾಲ್ ಆಡಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದರೆ, ಅಲ್ಲಿದ್ದ ಜನರು ಅದನ್ನು ತಮ್ಮ ಫೋನಿನಲ್ಲಿ ಫೋಟೋ ತೆಗೆದಿದ್ದಾರೆ. ಸದ್ಯ ಮಹಿಳೆಯರು ಫುಟ್‍ಬಾಲ್ ಆಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ತೋರಿಸಲಾಯಿತು. ಆಗ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ರೀತಿ ಮಾಡದಂತೆ ಎಚ್ಚರ ನೀಡಿದ್ದಾರೆ.