– ಅಂದು ನಾನೂ ಕುತಂತ್ರಕ್ಕೆ ಬಲಿಯಾಗಿದ್ದೆ
– ಮೋದಿ ಮಾತು ಕೇಳಿದ್ದರೆ ನಾನೇ ಸಿಎಂ ಆಗಿರುತ್ತಿದ್ದೆ
– ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಚಿವರ ಮಾತು
ಬೆಂಗಳೂರು: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗಿಂದು ಅದ್ಧೂರಿ ಸ್ವಾಗತ ಕೋರಲಾಯಿತು. ಮಹಿಳಾ ಘಟದ ಕಾರ್ಯಕರ್ತರು ಆರತಿ ಬೆಳಗಿ ಸ್ವಾಗತ ಕೋರಿದರು. ಅಲ್ಲದೇ ಜೆಡಿಎಸ್ ವತಿಯಿಂದ ಇಲ್ಲಿನ ಜೆಪಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ (Felicitation Ceremony) ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿ, ಕುಣಿದು ಕುಪ್ಪಳಿಸಿದರು.
Advertisement
ಮಂತ್ರಿ ಸ್ಥಾನ ಕರ್ನಾಟಕದ ಜನರಿಗೆ ಅರ್ಪಣೆ: ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಹೆಚ್‌ಡಿಕೆ, ಪಕ್ಷದ ಕಾರ್ಯಕರ್ತರ ದುಡಿಮೆಗೆ 2008 ರಿಂದ ಯಾವುದೇ ರೀತಿಯ ಪ್ರತಿಫಲ ಸಿಕ್ಕಿರಲಿಲ್ಲ. ಅಂತಹ ಸಮಯದಲ್ಲಿ ಪಕ್ಷವನ್ನ ಉಳಿಸಿದ ಬೆಳೆಸಿದ ಲಕ್ಷಾಂತರ ಕಾರ್ಯಕರ್ತರು ಈ ರಾಜ್ಯದಲ್ಲಿ ಇದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ. ಮೋದಿ (Narendra Modi) ಅವರು 2 ಬಾರಿ ಪ್ರಧಾನಿಯಾಗಿ ಉತ್ತಮವಾಗಿ ಕೆಲಸ ಮಾಡಿ, 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ಮಂತ್ರಿ ಮಂಡಲದಲ್ಲಿ ಕೇಂದ್ರದ ಮಂತ್ರಿ ಆಗಿದ್ದೇನೆ, ನನ್ನ ಪಾಲಿಗೆ ಬಂದಿರೋ ಈ ಮಂತ್ರಿ ಸ್ಥಾನವನ್ನ ಕರ್ನಾಟಕದ ಜನರಿಗೆ ಅರ್ಪಣೆ ಮಾಡ್ತೀನಿ ಎಂದು ಭಾವುಕರಾದರು.
Advertisement
Advertisement
ಮೋದಿಗೆ ಧನ್ಯವಾದ: 2018ರ ದಿನವನ್ನ ನಾನು ನೆನಪು ಮಾಡಿಕೊಳ್ತೀನಿ. ಅವತ್ತು ಬಹುಮತ ಬಾರದೇ ಇದ್ದಾಗ ಕಾಂಗ್ರೆಸ್‌ನವರು ಬಂದರು. ಕಾಂಗ್ರೆಸ್‌ನ ದೆಹಲಿ ನಾಯಕರು ದೇವೇಗೌಡರ ಮನೆಗೆ ಬಂದು ಒತ್ತಾಯ ಹಾಕಿ ನನಗೆ ಬಲವಂತವಾಗಿ ಸಿಎಂ ಸ್ಥಾನ ಕೊಟ್ಟಿದ್ದರು. ಇವತ್ತು ನಾನು ದೆಹಲಿಯಿಂದ ಕನ್ನಡ ನಾಡಿನ ಮಣ್ಣಿಗೆ ಪಾದಾರ್ಪಣೆ ಮಾಡಿದ್ದೇನೆ. ಆವತ್ತು ನಾನು ಸಿಎಂ ಇದ್ದಾಗ ಇದೇ ಜಾಗದಲ್ಲಿ ಸನ್ಮಾನ ಮಾಡಿದ್ರಿ. ಅಂದು ಕಣ್ಣಲ್ಲಿ ನೀರು ಹಾಕಿದ್ದೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದಾಗ ನಮ್ಮನ್ನ ಯಾವ ರೀತಿ ನಡೆಸಿ ಕೊಂಡಿದ್ದರು ಅಂತ ಹೇಳಿದ್ದೆ. ವಿಷಕಂಠ ಆಗಿದ್ದೇ ಅಂತ ಹೇಳಿದ್ದೆ. ಆದರೆ ಇವತ್ತು ನಾನು ಅತ್ಯಂತ ಸಂತೋಷದಿಂದ ಯಾವುದೇ ಕಲ್ಮಷ ಇಟ್ಟುಕೊಳ್ಳದೇ ಪ್ರಾಮಾಣಿಕ ನನ್ನ ಮಾತು ಹೇಳ್ತಿದ್ದೇನೆ. ಮೊದಲಿಗೆ ಮೋದಿ ಅವರಿಗೆ ಕಾರ್ಯಕರ್ತ ಸಮ್ಮುಖದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದು ನುಡಿದರು.
Advertisement
ನಾನೂ ಕುತಂತ್ರಕ್ಕೆ ಬಲಿಯಾಗಿದ್ದೆ: ಕಾಂಗ್ರೆಸ್ ಜೊತೆ ರಾಜ್ಯದಲ್ಲಿ ಸರ್ಕಾರ ಮಾಡಿ ಏನ್ ಆಯ್ತು ಅಂತ ಜನರಿಗೆ ಗೊತ್ತಿದೆ. ಆವತ್ತು ಸಹ ಕಾಂಗ್ರೆಸ್ ನಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡೋಕೆ ಬಿಡಲಿಲ್ಲ. ಹೀಗಾಗಿ ನಾನು ಶಾಸಕರ ಜೊತೆ ಸೇರಿ ಮುಂದೆ ಹೆಜ್ಜೆ ಇಟ್ಟಿದ್ವಿ. ಆದಾಗ ಬಳಿಕ ನಮ್ಮ ಮತ್ತು ಬಿಜೆಪಿ ಶಾಸಕರು ಸರ್ಕಾರ ಮಾಡೋಣ ಅಂತ ಹೋದ್ವಿ. ನಾನು ಆವತ್ತು ಎಂ.ಪಿ ಪ್ರಕಾಶ್ ಅವರಿಗೆ ನೀವೇ ಆಗಿ ಅಂತ ಹೇಳಿದ್ದೇ. ನಾನು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಅಂತ ಇದ್ದವನು ನಾನು, ಆದ್ರೆ ಅವರಿಗೆ ಅಧಿಕಾರ ಕೊಡಬಾರದು ಅಂತ ಕುತಂತ್ರ ನಡೆಯಿತು. ನಾನೂ ಸಹ ಆ ಕುತಂತ್ರಕ್ಕೆ ಬಲಿಯಾದೆ. ನಾನು ಪಕ್ಷ ಉಳಿಸಿಕೊಳ್ಳೋಕೆ 20 ತಿಂಗಳು ಕೆಲಸ ಮಾಡಿದೆ. ಅಂದು ಸಹ ನಾನು ಹಣದ ವ್ಯಾಮೋಹ ಬಲಿಯಾಗಿಲ್ಲ. ಲಾಟರಿ ನಿಷೇಧ ಮಾಡಿದೆ, ಸಾರಾಯಿ ನಿಷೇಧ ಮಾಡಿದೆ. ಪಕ್ಷ ಕಟ್ಟಬೇಕು ಅಂತ ಗ್ರಾಮ ವಾಸ್ತವ್ಯ ಮಾಡಿದೆ. ಹಣ ಮಾಡೋಕೆ ಇಷ್ಟಪಡೆಯಲಿಲ್ಲ ಎಂದು ಭಾವುಕರಾದರು.
ಜೆಡಿಎಸ್ ನಾಶ ಮಾಡ್ತೀವಿ ಅಂದಿದ್ದರು: ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರೋಣ ಅಂತ ಪ್ರಯತ್ನ ಮಾಡಿದೆ, ನನ್ನ ಆರೋಗ್ಯ ಲೆಕ್ಕಿಸದೇ ಕೆಲಸ ಮಾಡಿದೆ. ನಾನು ಅದರಲ್ಲಿ ಯಶಸ್ವಿಯಾಗಲಿಲ್ಲ. ನಾನು ಹೋದ ಕಡೆ ಜನ ಸೇರುತ್ತಾರೆ. `ಪಂಚರತ್ನ’ ಯಾತ್ರೆಗೆ ಲಕ್ಷಾಂತರ ಜನ ಸೇರಿದ್ದರು. ವಿವಿಧ ಬಗೆಯ ಹಾರಗಳನ್ನ ಹಾಕಿದ್ರು, ಗಿನ್ನಿಸ್ ರೇಕಾರ್ಡ್ ಆಯ್ತು. ಇಷ್ಟೆಲ್ಲ ಶ್ರಮ ಹಾಕಿದರೂ 19 ಸೀಟ್‌ಗೆ ಇಳಿಯಿತು. ಜೆಡಿಎಸ್ ಮುಗಿದೇ ಹೋಯ್ತು. ಪಕ್ಷಕ್ಕೆ ಬನ್ನಿ ಅಂತ ಕಾಂಗ್ರೆಸ್ ಅವರು ಕರೆಯುತ್ತಿದ್ದರು, ಕ್ಷೇತ್ರದ ಕೆಲಸಕ್ಕೆ ಹೋದ್ರೆ ಹಣ ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂತ ಹಣ ಕೋಡೋಕೆ ಬಂದಿದ್ದರು. ಜೆಡಿಎಸ್ ನಾಶ ಮಾಡ್ತೀವಿ ಅಂತ ಹೋದ್ರು. ಇವತ್ತು ಎಲ್ಲಿಗೆ ಬಂದು ನಿಂತಿದೆ? 2018ರಲ್ಲಿ ರಾಜ್ಯದ ವಿಷಯಗಳ ಬಗ್ಗೆ ಮೋದಿ ಅವರಿಗೆ ಮಾತಾಡೋಕೆ ಹೋಗಿದ್ದೆ, ಆಗ ನಿನ್ನ ಕೆಲಸಕ್ಕೆ ಬೆಲೆ ಇಲ್ಲ. ನೀನು ರಾಜೀನಾಮೆ ಕೊಟ್ಟು ಬಾ, ನೀನೇ ಸಿಎಂ ಆಗು ಅಂತ ಮೋದಿ ಹೇಳಿದ್ದರು. ಆವತ್ತು ಮೋದಿ ಮಾತು ಕೇಳಿದ್ದರೆ ಕಾರ್ಯಕರ್ತರು ಇಷ್ಟು ಕಷ್ಟ ಪಡುತ್ತಿರಲಿಲ್ಲ. ಆ ಅವಕಾಶ ನಾನೇ ಕಳೆದುಕೊಂಡೆ ಎಂದು ಕಹಿ ಸತ್ಯಗಳನ್ನು ಕಾರ್ಯಕರ್ತರ ಮುಂದೆ ಬಿಟ್ಟಿಟ್ಟರು.
ಈಗಲೂ ನಮ್ಮ ಜೊತೆಗೂಡಿ ಕೆಲಸ ಮಾಡು ಅಂತ ಮೋದಿ ಅವರು ಗೌರವ ಕೊಟ್ಟಿದ್ದಾರೆ. ಈ ಗೌರವ ಕಾರ್ಯಕರ್ತರಿಗೆ ಸೇರುತ್ತದೆ. ಇಲ್ಲದೇ ಹೋಗಿದ್ದರೆ ನಮ್ಮನ್ನ ಕೇಳೋರು ಯಾರು? ಕಾರ್ಯಕರ್ತರ ಪ್ರೀತಿಗೆ ಫಲ ಸಿಕ್ಕಿದೆ. ನಾವು ಗೆದ್ದಿರೋದು ಎರಡು ಸ್ಥಾನ. ಹಾಸನ ಜನರಿಗೆ ದೋಷ ಕೊಡೊಲ್ಲ, ಹಾಸನದ ಜನ ಕೊಟ್ಟಿರೋ ಶಕ್ತಿ ಕೊನೆ ಉಸಿರು ಇರೋ ವರೆಗೂ ಮರೆಯೊಲ್ಲ. ಕೆಲವು ರಾಜಕೀಯ ಆಯ್ತು. ಅದಕ್ಕೂ ಕಾಲ ಬರುತ್ತದೆ ಎಂದು ಹೇಳಿದರು.
ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಮೃದ್ಧಿ ಮಂಜುನಾಥ್, ಸಂಸದ ಮಲ್ಲೇಶ್ ಬಾಬು, ವೈಎಸ್‌ವಿ ದತ್ತಾ ಸೇರಿ ಶಾಸಕರು, ಮಾಜಿ ಶಾಸಕರು, ಪಕ್ಷದ ನಾಯಕರು ಭಾಗಿ ಪಾಲ್ಗೊಂಡಿದ್ದರು.