– ಪ್ರಕರಣ ಶುರುವಾಗಿದ್ದು ಹೇಗೆ? – ಆ 36 ಗಂಟೆಯಲ್ಲಿ ನಡೆದಿದ್ದೇನು?
– ಮಹಿಳೆ ಜೊತೆಗೆ ಸತತ 36 ಗಂಟೆ ಸಂಭಾಷಣೆ, ಬೆಚ್ಚಿ ಬೀಳಿಸುವ ಸೈಬರ್ ದಾಳಿ
ಬೆಂಗಳೂರು: ಡಿಜಿಟಲ್ ಯುಗದಲ್ಲಿ ಸೈಬರ್ ದಾಳಿಕೋರರ ಹಾವಳಿ ಹೆಚ್ಚಾಗಿದೆ. ಪ್ರತಿದಿನ ಒಬ್ಬರಿಲ್ಲೊಬ್ಬರು ಹಲವು ಸಂದರ್ಭಗಳಲ್ಲಿ ವಂಚನೆಗೆ ಒಳಗಾಗುತ್ತಲೇ ಇದ್ದಾರೆ. 2018ರಲ್ಲಿ ತೆರೆಕಂಡ ತಮಿಳಿನ `ಇರುಂಬುತಿರೈ’ (ಕಬ್ಬಿಣದ ಪರದೆಯ ಹಿಂದೆ) ಸಿನಿಮಾ ಇಂತಹ ಸೈಬರ್ ವಂಚನೆ, ವಂಚಕರ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಸೈಬರ್ ವಂಚನೆಯ (Cyber Crime) ದಾಳಿ ಸಾಮಾನ್ಯರು ಊಹಿಸಲು ಸಾಧ್ಯವಾಗದಷ್ಟು ಕ್ರೂರ ಜಗತ್ತು ಎಂದೇ ಈ ಸಿನಿಮಾ ಬಿಂಬಿಸಿತ್ತು. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.
Advertisement
ಹೌದು.. ಫೆಡೆಕ್ಸ್ (FedEx) ಅಂತಾರಾಷ್ಟ್ರೀಯ ಖಾಸಗಿ ಕಂಪನಿಯ ಹೆಸರಲ್ಲಿ ಬೆಂಗಳೂರಿನ ಮಹಿಳೆಗೆ (Bengaluru Women) ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರನ್ನ ಸತತ 36 ಗಂಟೆಗಳ ಕಾಲ ವೀಡಿಯೋ ಕಾಲ್‌ನಲ್ಲಿ ನಿಯಂತ್ರಿಸಿದ್ದು, ಆಕೆಯ ನಗ್ನ ವೀಡಿಯೋವನ್ನ ಸೈಬರ್ ವಂಚಕರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಆ ವೀಡಿಯೋವನ್ನ ಡಾರ್ಕ್‌ವೆಬ್‌ನಲ್ಲಿ ಹಾಕುವುದಾಗಿ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾರೆ. ಆಗಷ್ಟೇ ಮಹಿಳೆ ವೀಡಿಯೋ ಕರೆಯನ್ನ ಸ್ಥಗಿತಗೊಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಆ 36 ಗಂಟೆಗಳ ಕಾಲ ನಡೆದಿದ್ದೇನು? ಅಷ್ಟು ಸಮಯ ಆಕೆಯನ್ನ ನಿಯಂತ್ರಿಸಿದ್ದೇಗೆ? ಆಕೆ ಸೈಬರ್ ವಂಚನೆಗೆ ಒಳಗಾಗಿರೋದು ಗೊತ್ತಾಗಿದ್ದು ಹೇಗೆ? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
Advertisement
Advertisement
ಪ್ರಕರಣ ಶುರುವಾಗಿದ್ದು ಹೇಗೆ?
ಇದೇ ಏಪ್ರಿಲ್ 3 ರಂದು ಮಧ್ಯಾಹ್ನ 2:15 ರಂದು ಬೆಂಗಳೂರಿನ 29 ವರ್ಷದ ಮಹಿಳೆಯೊಬ್ಬರಿಗೆ ದೂರವಾಣಿ ಕರೆ ಬಂದಿತ್ತು. ಈ ದೂರವಾಣಿ ಕರೆ ಏಪ್ರಿಲ್ 5ರಂದು ಮಧ್ಯಾಹ್ನ 1:15 ಗಂಟೆವರೆಗೂ ಮುಂದುವರಿದಿತ್ತು. ಆಕೆ ತಾನು ವಂಚನೆಗೆ ಒಳಗಾಗಿದ್ದೇನೆ ಅನ್ನೋದು ಕನಿಷ್ಠ ಸುಳಿವು ಆಕೆಗೆ ಬರಲೇ ಇಲ್ಲ, ತಿಳಿದುಕೊಳ್ಳುವಷ್ಟರಲ್ಲೇ ಸೈಬರ್ ವಂಚಕರು 15 ಲಕ್ಷ ರೂ. ಸುಲಿಗೆ ಮಾಡಿದ್ದರು. ತಾನು ವಂಚನೆಗೆ ಒಳಗಾಗಿರುವುದು ತಿಳಿದ ಮೇಲೆ ಮಹಿಳೆ ಪೂರ್ವ ಸಿಇನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement
ಆ 36 ಗಂಟೆಯಲ್ಲಿ ನಡೆದಿದ್ದೇನು?
ಫೆಡೆಕ್ಸ್ ಕಂಪನಿ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಮಹಿಳೆಗೆ ಕರೆ ಮಾಡಿದ್ದಾನೆ. ಏಪ್ರಿಲ್ 3 ರಂದು ಮಧ್ಯಾಹ್ನ 2:15ರ ಹೊತ್ತಿಗೆ ಮಹಿಳೆಗೆ ಕರೆ ಬಂದಿದೆ. ಸಂತ್ರಸ್ತೆ ಹೆಸರಿನಲ್ಲಿ ಥೈಲ್ಯಾಂಡ್‌ಗೆ ಕಳುಹಿಸಲಾದ ಪಾರ್ಸೆಲ್‌ನಲ್ಲಿ ಸುಮಾರು 140 ಗ್ರಾಂ ಎಂಡಿಎಂಎ (ಮಾದಕ ವಸ್ತು ಡ್ರಗ್ಸ್) ಪತ್ತೆಯಾಗಿದೆ ಎಂದು ಆಕೆಯನ್ನ ಹೆದರಿಸಿದ್ದಾನೆ. ಬಳಿಕ ಕರೆಯನ್ನ ಸ್ಥಗಿತಗೊಳಿಸಲು ಆಸ್ಪದ ನೀಡದೇ ಮುಂಬೈ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಗೆ ವರ್ಗಾಯಿಸಿದ್ದಾನೆ.
ಏಪ್ರಿಲ್ 5 ಕರೆ ಬಂದಾಗ…: ನಂತರ ತಾನು ಮುಂಬೈ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ, ಆಕೆಗೆ ಸ್ಕೈಪ್ (ವೀಡಿಯೋ ಕರೆಗೆ ಬಳಸುವ ಅಪ್ಲಿಕೇಷನ್) (Skype) ಡೌನ್‌ಲೋಡ್ ಮಾಡಿಕೊಳ್ಳಲು ತಿಳಿಸಿದ್ದಾನೆ. ಆಕೆ ಮಲಗಿದ್ದರೂ ತಮಗೆ ತಿಳಿಯಬೇಕು. ನಮ್ಮ ಕಣ್ತಪ್ಪಿಸಿ ಆಕೆಯೆ ಯಾವುದೇ ಕೆಲಸ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ. ಈ ಮಧ್ಯೆ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ವಂಚಕ ಮಾನವ ಕಳ್ಳಸಾಗಣೆ ಮತ್ತು ಡ್ರಗ್ಸ್ ದಂಧೆಯಲ್ಲಿ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿದೆ ಎಂದು ಮತ್ತಷ್ಟೂ ಆಕೆಯನ್ನ ಹೆದರಿಸಿದ್ದಾನೆ. ಬಳಿಕ ಅದೇ ಕರೆಯನ್ನ ಸಿಬಿಐ ಅಧಿಕಾರಿ ಎಂದು ಹೇಳಿಕೊಳ್ಳುವ ಮತ್ತೊಬ್ಬ ವ್ಯಕ್ತಿ ಅಭಿಷೇಕ್ ಚೌಹಾಣ್ ಎಂಬಾತನಿಗೆ ವರ್ಗಾಯಿಸಿದ್ದಾನೆ. ಚೌಹಾಣ್, ಆಕೆಗೆ ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆ, ಐಡಿ ಕಾರ್ಡ್ ಕಳವು ಪ್ರಕರಣಗಳಿವೆ ಎಂದು ಹೇಳಿದ್ದಾನೆ. ಅಲ್ಲದೇ ಆಕೆಯ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆಯೂ ಪ್ರಶ್ನೆ ಮಾಡಿದ್ದಾನೆ. ಇದು ರಾಜಕಾರಣಿಗಳು ಮತ್ತು ಪೊಲೀಸರನ್ನು ಒಳಗೊಂಡಿರುವ ಸೂಕ್ಷ್ಮ ಪ್ರಕರಣ. ಹಾಗಾಗಿ ತನಿಖೆ ಮುಗಿಯುವವರೆಗೂ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾನೆ. ಅಲ್ಲದೇ ಸ್ಕೈಪ್ ಮೂಲಕ ವೀಡಿಯೋ ಕರೆ ಮಾಡಿದ್ದ ವಂಚಕರು ಆಕೆ ಏನು ಮಾಡಿದರೂ ತಮಗೆ ಗೊತ್ತಾಗಬೇಕು, ಆಕೆ ಕೋಣೆಯಲ್ಲಿ ಮಲಗಿದ್ದರೂ ಅದು ಅವರ ಕಣ್ಗಾವಲಿನಲ್ಲೇ ಇರಬೇಕು ಎಂದು ಎಚ್ಚರಿಕೆ ನೀಡಿದ್ದರು.
ಏಪ್ರಿಲ್ 4:
ಆಕೆಯನ್ನ ವೀಡಿಯೋ ಕರೆ ಮೂಲಕವೇ ನಿಯಂತ್ರಿಸುತ್ತಿದ್ದ ವಂಚಕರು ಏಪ್ರಿಲ್ 4 ರಂದು ಮಹಿಳೆಯ ಎಲ್ಲಾ ವಹಿವಾಟನ್ನು ಪರಿಶೀಲಿಸಬೇಕು. ಅದಕ್ಕಾಗಿ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಅವರ ಖಾತೆಗೆ ವರ್ಗಾಯಿಸುವಂತೆ ಹೇಳಿದ್ದಾರೆ. ಕಿಂಚಿತ್ತೂ ಯೋಚನೆ ಮಾಡದೇ ಆಕೆ, ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಖಾತೆಯಲ್ಲಿದ್ದ 10.7 ಲಕ್ಷ ರೂ.ಗಳನ್ನ ವಂಚಕರ ಖಾತೆಗೆ ವರ್ಗಾಯಿಸಿದ್ದಾಳೆ. ನಂತರ ತಮ್ಮ ಮನೆಗೆ ಬೀಗ ಹಾಕಿಕೊಂಡು ಮುಂದಿನ ಸೂಚನೆಗೆ ಕಾಯ್ದಿರುವಂತೆ ತಿಳಿಸಿದ್ದಾರೆ. ಆದ್ರೆ ಕರೆಯನ್ನು ಸ್ಥಗಿತಗೊಳಿಸಿರಲಿಲ್ಲ. ಈ ನಡುವೆ ಆಕೆಯ ಕ್ರಿಡಿಟ್ ಕಾರ್ಡ್ ಬಳಸಿ ಸುಮಾರು 4 ಲಕ್ಷ ರೂ. ಲಪಟಾಯಿಸಿದ್ದಾರೆ.
ಏಪ್ರಿಲ್ 5: ಬಳಿಕ ಆಕೆಯನ್ನ ಸ್ಪೈಪ್ ವೀಡಿಯೋ ಕಾಲ್ ಮೂಲಕವೇ ʻನಾರ್ಕೋಟಿಕ್ಸ್ ಪರೀಕ್ಷೆʼಗೆ ಒಳಪಡಿಸಿದ್ದಾರೆ. ಅದಕ್ಕಾಗಿ ಆಕೆಯನ್ನ ವಿವಸ್ತ್ರಗೊಳಿಸಿದ್ದಾರೆ. ಬಳಿಕ ಆಕೆಯ ಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮಾಡಲು ಶುರು ಮಾಡಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಯೊಳಗೆ 10 ಲಕ್ಷ ರೂ. ಪಾವತಿಸದೇ ಇದ್ದರೆ, ಡ್ರಗ್ಸ್ ಪ್ರಕರಣದಲ್ಲಿ ನಿಮ್ಮನ್ನ ಸಿಲುಕಿಸುತ್ತೇವೆ, ನಿಮ್ಮ ಕುಟುಂಬದ ಸದಸ್ಯರನ್ನ ಬಂಧಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹಣ ಪಾವತಿ ಮಾಡದೇ ಇದ್ದರೆ ಬೆತ್ತಲೆ ವೀಡಿಯೋವನ್ನ ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ತಾನು ಸೈಬರ್ ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿದ ಮಹಿಳೆ ಏಪ್ರಿಲ್ 5 ರಂದು ವೀಡಿಯೋ ಕರೆಯನ್ನ ಸ್ಥಗಿತಗೊಳಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ, ಸುಲಿಗೆ ಮತ್ತು ವಂಚನೆಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಫೆಡೆಕ್ಸ್ ಸ್ಪಷ್ಟನೆ:
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಫೆಡೆಕ್ಸ್ ಕಂಪನಿಯ ವಕ್ತಾರರು, ದೂರವಾಣಿ ಕರೆ, ಇ-ಮೇಲ್ ಅಥವಾ ಸರಕುಗಳನ್ನು ಸಾಗಿಸುವ ಅಥವಾ ಹಿಡಿದಿಟ್ಟುಕೊಂಡು ವೈಯಕ್ತಿಕ ಮಾಹಿತಿಯನ್ನು ಕಂಪನಿ ಕೇಳುವುದಿಲ್ಲ. ಸಂಸ್ಥೆ ಹೆಸರು ಹೇಳಿಕೊಂಡು ಯಾವುದೇ ಅನುಮಾನಾಸ್ಪದ ವ್ಯಕ್ತಿ ಫೋನ್ ಕರೆ ಮಾಡಿದರೆ ಅಥವಾ ಸಂದೇಶ ಸ್ವೀಕರಿಸಿದರೆ, ತಕ್ಷಣ ಅವರು ಸ್ಥಳೀಯ ಕಾನೂನು ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದ್ದಾರೆ.