ಚಿಕ್ಕಮಗಳೂರು: ವಿಜ್ಞಾನಿಗಳು ಮಂಗನಿಂದ ಮಾನವ ಎಂದಿದ್ರು. ಆದ್ರೆ ಈಗ ಮಲೆನಾಡಿಗರು ಮಂಗನಿಂದ ಮರಣ ಅಂತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಜನರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆ ಈಗ ಚಿಕ್ಕಮಗಳೂರಿಗೂ ಕಾಲು ಇಟ್ಟಿದಿಯಾ ಎನ್ನುವ ಅನುಮಾನ ಸೃಷ್ಟಿಯಾಗಿದೆ.
ಮೊದಲೆಲ್ಲ ದೇವಸ್ಥಾನದಲ್ಲಿ ಮಂಗನನ್ನ ಕಂಡರೆ ಆಂಜನೇಯನ ಸ್ವರೂಪ ಅಂತಿದ್ದರು. ಆದ್ರೆ ಮಲೆನಾಡಲ್ಲಿ ಮಂಗನನ್ನ ಕಂಡರೆ ಅದು ನಡುಗ್ತಿದ್ಯಾ, ಬಳಲುತ್ತಿದ್ಯಾ ಅಂತ ನೋಡ್ತಾರೆ. ಒಂದು ವೇಳೆ ನಡುಗ್ತಿದ್ದರೆ ಎದ್ನೋ-ಬಿದ್ನೋ ಅಂತ ಜನ ಮಂಗಗಳಿಂದ ದೂರ ಓಡ್ತಾರೆ. ಯಾಕಂದ್ರೆ ಮಲೆನಾಡಿನ ಭಾಗದಲ್ಲಿ ಮಂಗ ಅನ್ನೋ ಪದ ಹುಟ್ಟಿಸಿರೋ ಭಯ ಅಂತದ್ದು. ಮಂಗನ ಕಾಯಿಲೆ ಹೆಸರು ಕೇಳಿದ್ರೇನೆ ಒಂದು ಕ್ಷಣ ವಿಚಲಿತಗೊಳ್ತೀವಿ. ಶಿವಮೊಗ್ಗದಲ್ಲಿ ತನ್ನ ಅಟ್ಟಹಾಸ ತೋರಿದ್ದ ಈ ಕಾಯಿಲೆ ಇದೀಗ ಕಾಫಿನಾಡಿನ ಮಲೆನಾಡು ಭಾಗಕ್ಕೂ ಆವರಿಸಿರೋ ಅನುಮಾನ ಹುಟ್ಟಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿನ ಒಂಬತ್ತು ಕಡೆ ಮಂಗಗಳು ಸಾವನ್ನಪ್ಪುತ್ತಿವೆ. ಈ ಮಂಗಗಳ ಸಾವು ಜಿಲ್ಲೆಯ ಜನರ ನಿದ್ದೆಗೆಡಿಸಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ
ಎನ್.ಆರ್ ಪುರದ ಬಾಳೆಹೊನ್ನೂರು, ಶೃಂಗೇರಿಯ ಮೇಲ್ಪಾಲ್ ಸೇರಿದಂತೆ ಐದಾರು ಕಡೆ ಮಂಗಗಳ ಸಾವಿನಿಂದ ಗ್ರಾಮೀಣ ಭಾಗದ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರನ್ನ ಬಲಿ ಪಡೆದಿರೋ ಈ ಮಂಗನ ಕಾಯಿಲೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲೂ ಆತಂಕ ಸೃಷ್ಟಿಸಿದೆ. ಸತ್ತ ಮಂಗಗಳ ಶವಪರೀಕ್ಷೆ ನಡೆಸಿ ಬೆಂಗಳೂರು, ಶಿವಮೊಗ್ಗ, ಪುಣೆ ಹಾಗೂ ಮಣಿಪಾಲ್ ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗೆಂದು ರಕ್ತದ ಮಾದರಿಯನ್ನ ಕಳುಹಿಸಲಾಗಿದೆ. ಅಷ್ಟೇ ಅಲ್ಲದೆ, ಮಂಗಗಳು ಸತ್ತಿರೋ ಗ್ರಾಮದ ಸುತ್ತಮುತ್ತಲಿನ ಜನರ ರಕ್ತದ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ.
ತೀರ್ಥಹಳ್ಳಿ, ಸಾಗರದ ಮಲೆನಾಡಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಈ ಕಾಯಿಲೆ ಎಲ್ಲಿ ನಮಗೂ ತಟ್ಟುತ್ತೋ ಅಂತ ಕಾಫಿನಾಡ ಮಲೆನಾಡು ಭಾಗದ ಜನ ಕೂಡ ಆತಂಕದಲ್ಲಿದ್ದಾರೆ. ಮಲೆನಾಡಲ್ಲಿ ಮೊದಲೇ ಸುಸರ್ಜಿತ ಸರ್ಕಾರಿ ಆಸ್ಪತ್ರೆಗಳಿಲ್ಲ. ಖಾಸಗಿ ಆಸ್ಪತ್ರೆಗಳಿಗೇ ಹೋಗಬೇಕು. ಜನಸಾಮಾನ್ಯರಿಗೆ ಕೂಲಿ ಹಾಗೂ ಹಣದ ಸಮಸ್ಯೆ ಇದೆ. ಒಂದು ವೇಳೆ, ಲ್ಯಾಬ್‍ನಿಂದ ವರದಿ ಪಾಸಿಟಿವ್ ಎಂದು ಬಂದರೆ ಈ ಹೆಮ್ಮಾರಿ ಕಾಯಿಲೆ ಕಾಫಿನಾಡಲ್ಲಿ ಇನ್ನೆಷ್ಟು ಬಲಿ ಪಡಿಯುತ್ತೋ ಗೊತ್ತಿಲ್ಲ. ಹಾಗಾಗಿ, ಜಿಲ್ಲಾಡಳಿತ ಈಗಾಗಲೇ ಮುಂಜಾಗೃತ ಕ್ರಮವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರಕ್ಕೆ 2000 ಚುಚ್ಚು ಮದ್ದುಗಳಿಗೆ ಮನವಿ ಮಾಡಲಾಗಿದೆ. ಜಾನುವಾರುಗಳನ್ನ ಕಾಡಿಗೆ ಕರೆದುಕೊಂಡು ಹೋಗುವವರಿಗೆ ಡಿಎಂಪಿ ತೈಲವನ್ನು ನೀಡಲಾಗಿದೆ. ಈ ಕುರಿತು ಮಲೆನಾಡಿನ ಪ್ರತಿ ಆಸ್ಪತ್ರೆಯ ವೈದ್ಯರಿಗೂ ಸೂಚನೆ ನೀಡಲಾಗಿದೆ. ಹಾಗೆಯೇ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಡಲು ಆದೇಶಿಸಿದೆ. ಅಷ್ಟೇ ಅಲ್ಲದೆ ಅಗತ್ಯ ಬಿದ್ದರೆ ಮುನ್ನೇಚ್ಛರಿಕೆಯಾಗಿ ಜನಸಾಮಾನ್ಯರಿಗೆ ಔಷಧಿಗಳನ್ನ ನೀಡೋದಕ್ಕೂ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಈ ಮಹಾಮಾರಿಗೆ 1993 ರಿಂದ 1995ರ ಅವಧಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೆ ಆ ಹೆಮ್ಮಾರಿ ಬರುವ ಸೂಚನೆ ಸಿಕ್ಕಿರೋದು ಜಿಲ್ಲಾಡಳಿತಕ್ಕೆ ಬಿಸಿ ತುಪ್ಪವಾಗಿದೆ. ಅದೇನೆ ಆಗಲಿ ಮಂಗನ ಕಾಯಿಲೆ ಸೋಂಕು ನಮಗೆ ತಗುಲದೆ ಇರಲಿ ಅಂತ ಮಲೆನಾಡಿಗರು ಆಂಜನೇಯನ ಬಳಿ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಆದ್ರೆ, ಲ್ಯಾಬ್‍ನಿಂದ ವರದಿ ಬಂದ್ಮೇಲಷ್ಟೆ ಇಲ್ಲಿನ ವಾಸ್ತವ ಸ್ಥಿತಿಗತಿಯ ಬಗ್ಗೆ ಮನವರಿಕೆಯಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv