FDA ಪರೀಕ್ಷೆಯಲ್ಲಿ ಅಕ್ರಮ- 300 ಜನರ ಜೊತೆ ಡೀಲ್ ಕುದುರಿಸಿದ್ದ ಆರ್‌ಡಿ ಪಾಟೀಲ್

Public TV
2 Min Read
YADAGIRI RD PATIL

– ಅನೂಕೂಲಕ್ಕೆ ತಕ್ಕೆ ಹಣ ಕೊಟ್ಟಿದ್ದ ಅಭ್ಯರ್ಥಿಗಳು
– ಉಳಿದ ಹಣಕ್ಕಾಗಿ ಒರಿಜಿನಲ್ ದಾಖಲೆ ಪಡೆದುಕೊಳ್ತಿದ್ದ

ಯಾದಗಿರಿ: ರಾಜ್ಯದಲ್ಲಿ ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ನ ನಿಗಮ-ಮಂಡಳಿಗಳ ವಿವಿಧ ಹುದ್ದೆ ಪರೀಕ್ಷೆಯ (FDA Exam) ಗೋಲ್ಮಾಲ್ ಪ್ರಕರಣ ಬಗೆದಷ್ಟು ಬಯಲಾಗ್ತಿದೆ. ಇಡೀ ಪ್ರಕರಣದಲ್ಲಿ ಆರ್ ಡಿ ಪಾಟೀಲ್ ಕೈವಾಡದ ಬಗ್ಗೆ ಬಂಧಿತ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದು, ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಎಫ್‍ಡಿಎ ಪರೀಕ್ಷೆಯ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ರೋಚಕ ಟ್ವಿಸ್ಟ್ ಪಡೆಯುತ್ತಿದೆ.

YADAGIRI 1

ಪಿಎಸ್‍ಐ ಪರೀಕ್ಷೆಯ ಅಕ್ರಮಕ್ಕೂ, ಈ ಎಫ್‍ಡಿಎ ಪರೀಕ್ಷಾ ಅಕ್ರಮಕ್ಕೂ ಒಂದೇ ಲಿಂಕ್ ಇರೋದೂ ಈಗಾಗಲೇ ಸ್ಪಷ್ಟವಾಗಿದ್ದು, ಆರ್‌ ಡಿ ಪಾಟೀಲ್ ಪಾತ್ರ ಬಟಾಬಯಲಾಗಿದೆ. ಎಫ್‍ಡಿಎ ಪರೀಕ್ಷೆಯಲ್ಲಿ ಅಕ್ರಮಕ್ಕಾಗಿ ಈ ಆರ್‌ ಡಿ ಪಾಟೀಲ್ 300 ಜನರ ಜೊತೆ ಡೀಲ್ ಕುದುರಿಸಿದ್ದ. ಹೀಗೆ ಆರ್ ಡಿ ಪಾಟೀಲ್ ಡೀಲ್‍ಗೆ ಒಪ್ಪಿಕೊಂಡಿದ್ದವರು ಅಡ್ವಾನ್ಸ್ ಆಗಿ ಎರಡು.. ಆರು..ಎಂಟು ಲಕ್ಷ ಹೀಗೇ ಅನುಕೂಲಕ್ಕೆ ತಕ್ಕಷ್ಟು ಹಣ ಕೊಟ್ಟಿದ್ರು.

ಅಂತಿಮ ಪಟ್ಟಿ ಪ್ರಕಟ ಮಾಡಿದಾಗ ಮಿಕ್ಕಿದ ಹಣ ಕೊಡಬೇಕು. ಇದಕ್ಕಾಗಿ ಈ ಆರ್‌ ಡಿ ಪಾಟೀಲ್ ಪರೀಕ್ಷೆ ಬರೆಯುತ್ತಿದ್ದವರ ಒರಿಜಿನಲ್ ಡಾಕ್ಯುಮೆಂಟ್ ತನ್ನ ಬಳಿ ಇಟ್ಕೊಂಡಿದ್ದಾನೆ. ಲಿಸ್ಟ್ ಬಿಟ್ಟಾಗ ಹೇಗೋ ಆಯ್ಕೆ ಪಟ್ಟಿಯಲ್ಲಿ ಹೆಸರು ಪ್ರಕಟ ಆಗಿರುತ್ತೆ. ಆಮೇಲೆ ಡಾಕ್ಯುಮೆಂಟ್ ವೆರಿಪಿಕೇಷನ್‍ಗೆ ಒರಿಜಿನಲ್ ಡಾಕ್ಯುಮೆಂಟ್ ಬೇಕಾಗುತ್ತೆ. ಆಗ ಬಾಕಿ ಹಣ ಪಡೆದುಕೊಂಡು ಡಾಕ್ಯುಮೆಂಟ್ ವಾಪಸ್ ಕೊಡುತ್ತಿದ್ದನಂತೆ ಈ ಐನಾತಿ ಆರ್‌ ಡಿ ಪಾಟೀಲ್.

ಪ್ರಕರಣ ಸಂಬಂಧ ಬಂಧಿತ ಆರೋಪಿ ಬಾಬುರಾವ್ ಹಾಗೂ ಸಿದ್ರಾಮ ಅಲಿಯಾಸ್ ಪುಟ್ಟಪ್ಪ ಇಬ್ಬರೂ ಆರ್ ಡಿ ಪಾಟೀಲನ ಹತ್ತಿರದ ಸಂಬಂಧಿಗಳು. ಈ ಬಾಬುರಾವ್ ಬ್ಲೂಟೂತ್ ಡಿವೈಸ್ ಸಪ್ಲೈ ಮಾಡೋದರ ಜೊತೆಗೆ ಅಭ್ಯರ್ಥಿಗಳಿಗೆ ಉತ್ತರ ಹೇಳೋದನ್ನ ನೋಡಿಕೊಳ್ತಿದ್ದ. ಇತ್ತ ಸಿದ್ರಾಮ ಅಲಿಯಾಸ್ ಪುಟ್ಟಪ್ಪ ಅಭ್ಯರ್ಥಿಗಳನ್ನ ಹುಡುಕಿ ಹಣ ಫಿಕ್ಸ್ ಮಾಡ್ತಿದ್ದ. ಫಿಕ್ಸ್ ಮಾಡಿದ ಹಣದ ಪೈಕಿ, ಅಡ್ವಾನ್ಸ್ ಪಡೆದುಕೊಂಡು ಬರುವಾತನೇ ಈ ಸಿದ್ರಾಮ ಅಲಿಯಾಸ್ ಪುಟ್ಟಪ್ಪ.

YADAGIRI FDA 1

ನೌಕರಿಯ ಆಸೆಗಾಗಿ ಅದೇಷ್ಟೋ ಜನ ಹೊಲ, ಮನೆ ಮಾರಾಟ ಮಾಡಿ, ಆರ್ ಡಿ ಪಾಟೀಲ್ ಗೆ (RD Patil) ಹಣ ಕೊಟ್ಟಿದ್ದಾರೆ. ಇನ್ನೂ ಕೆಲವರು ಬ್ಯಾಂಕ್ ಸೇರಿದಂತೆ ಖಾಸಗಿಯಾಗಿ ಸಾಲ ಮಾಡಿ ಕೊಟ್ಟಿದ್ದು, ಅಕ್ರಮವಾಗಿ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಯೋದಕ್ಕೆ ಮುಂದಾಗಿದ್ದ ಒಬ್ಬೊಬ್ಬರದ್ದು ಒಂದೊಂದು ಕಥೆ ಇದೆ. ಇದನ್ನ ಸ್ವತಃ ಅರೆಸ್ಟ್ ಆಗಿರುವವರೇ ಪೊಲೀಸರ ಮುಂದೆ ಸತ್ಯ ಬಾಯಿಬಿಟ್ಟಿದ್ದಾರೆ. ಆದರೆ ಇದುವರೆಗೂ ಆರ್ ಡಿ ಪಾಟೀಲ್ ಮಾತ್ರ ಬಿಂದಾಸ್ ಆಗಿ ಆಚೆ ಇದ್ದಾನೆ. ಇದು ರಾಜ್ಯದ ಜನರ ಕಣ್ಣು ಕೆಂಪಾಗಿಸಿದೆ.

ಒಟ್ಟಿನಲ್ಲಿ ಸರ್ಕಾರಿ ನೌಕರಿಯ ಆಸೆಗಾಗಿ ಆರ್ ಡಿ ಪಾಟೀಲ್ ಕುತಂತ್ರಕ್ಕೆ ಬಲಿಯಾಗಿ, ಭವಿಷ್ಯಕ್ಕೆ ಕೊಳ್ಳಿ ಇಟ್ಕೊಂಡಿರೋ ಆರೋಪಿಗಳು ಇದೀಗ ಪಶ್ಚಾತ್ತಾಪ ಪಡ್ತಿದ್ದಾರೆ. ಪ್ರಕರಣ ಕಿಂಗ್ ಪಿನ್ ಆರ್ ಡಿ ಪಾಟೀಲ್ ಮಾತ್ರ ಬಿಂದಾಸ್ ಆಗಿ ಹೊರಗಡೆ ಎಂಜಾಯ್ ಮಾಡ್ತಿದ್ದಾನೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಪ್ರಕರಣದ ಹಾದಿ ತಪ್ಪೋ ಮೊದಲು, ಪ್ರಮುಖ ಆರೋಪಿಯನ್ನ ಬಂಧಿಸಿ, ಅಕ್ರಮದಲ್ಲಿ ಭಾಗಿಯಾಗಿರೋ ಅಧಿಕಾರಿಗಳ ಕೈಗೆ ಕೊಳ ಹಾಕಿ, ರಾಜ್ಯದಲ್ಲಿ ಮತ್ತೊಮ್ಮೆ ಈ ರೀತಿಯ ಅಕ್ರಮ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸುತ್ತಿದ್ದರೆ.

Web Stories

Share This Article