ಒಬ್ಬಳೇ ಮುದ್ದಾದ ಮಗಳು.. ಸಾಕೆಂದರೂ ಬೊಗಸೆ ನೀಡುವಷ್ಟು ಪ್ರೀತಿ ಮಾಡುವ, ಕೇಳಿದ್ದನ್ನು ತಂದು ಕೊಡುವ ತಂದೆ-ತಾಯಿ. ಸುಂದರ ಸಂಸಾರ.. ಆದ್ರೆ ಪ್ರೀತಿಯ ಮಗಳಿಗೆ ಮಾತ್ರ ಬೆಚ್ಚಗಿನ ಸುಂದರ ಸಂಸಾರದ ಗೂಡಿನಿಂದ ಹಾರಿ ಪ್ರಪಂಚ ನೋಡ್ಬೇಕು ಅನ್ನುವ ಆಸೆ. ತಂದೆ-ತಾಯಿಯ ಕನಸೇ ಆ ಮಗಳು. ಆಕೆಯನ್ನು ಒಂದು ಕ್ಷಣ ಬಿಟ್ಟಿರೋದಕ್ಕೆ ಸಾಧ್ಯವಿಲ್ಲದ ತಂದೆ-ತಾಯಿ ಆಕೆಯನ್ನು ಬಿಟ್ಟಿರೋದಕ್ಕೆ ಸಾಧ್ಯವೇ..? ತಂದೆ-ತಾಯಿಯ ಮುದ್ದು ಮಗಳೆ ಅಮ್ಮು..
Advertisement
ತಂದೆ-ತಾಯಿ ಮಾತ್ರವಲ್ಲ ಮಗಳೂ ಕೂಡ ಆಗಸದಷ್ಟು ಹೆಚ್ಚು ಪ್ರೀತಿ ಮಾಡುತ್ತಿದ್ಳು. ಅದರಲ್ಲೂ ಹೆಣ್ಣುಮಕ್ಕಳಿಗೆ ಅಪ್ಪನೆಂದ್ರೆ ತುಸು ಪ್ರೀತಿ ಹೆಚ್ಚೆ. ಅಮ್ಮುವನ್ನು ಕಂಡ್ರೆ ತಂದೆಗೆ ಅದೆಲ್ಲಿಲ್ಲದ ಪ್ರೀತಿ. ಆದರೆ ಆ ಪ್ರೀತಿಯೇ ಕೆಲವೊಮ್ಮೆ ಅಮ್ಮುವಿಗೆ ಸರಪಳಿಯಾಗಿಬಿಡುತ್ತಿದ್ದು. ಓದು, ಆಟ ಎಲ್ಲದರಲ್ಲೂ ಮುಂದಿದ್ದ ಅಮ್ಮುವಿಗೆ ಕೆಲವೊಂದು ರೂಲ್ಸ್‌ಗಳನ್ನು ಹಾಕಿದ್ರು ತಂದೆ. ಸ್ಕೂಲಿಗೆ ಹೋಗಿ ಮನೆಗೆ ಬರ್ಬೇಕು ಉಳಿದದ್ದೆಲ್ಲ ಹೆಣ್ಣುಮಕ್ಕಳಿಗೆ ಬೇಡ ಅನ್ನೋದು ಅಮ್ಮು ತಂದೆ ವಾದ. ಆಕಾಶದಷ್ಟು ಪ್ರೀತಿಸುವ ಅಪ್ಪನ ಈ ವಿಪರೀತ ಕಾಳಜಿ ಅಮ್ಮುವಿಗೆ ಇಷ್ಟವಾಗ್ತಾ ಇರ್ಲಿಲ್ಲ. ಮುತ್ತಿನಂತೆ ಜೋಪಾನ ಮಾಡಿದ್ದ ಮಗಳಿಗೆ ಸಮಾಜವನ್ನು ಎದುರಿಸುವ ಶಕ್ತಿಯಿಲ್ಲ ಅನ್ನೋದು ಅಮ್ಮು ತಂದೆ ಭಯ.. ತನ್ನ ಮಗಳಿಗೆ ಒಂದು ಚೂರು ನೋವಾಗಬಾರದು ಅನ್ನೋದು ಅಪ್ಪನ (Father’s Day) ಅಭಿಪ್ರಾಯ ಅನ್ನೋದು ಅಮ್ಮುವಿಗೆ ಅರಿವಿಗೆ ಬರಲೇ ಇಲ್ಲ.
Advertisement
Advertisement
ಬೆಟ್ಟದಷ್ಟು ಪ್ರೀತಿ ಮಾಡುವ ಅಮ್ಮುವಿನ ಅಪ್ಪ ಒಂದು ದಿನ ಹುಷಾರಿಲ್ಲದೆ ಮಲಗಿದ್ರು. ಸಹಜ ಕಾಯಿಲೆ ಅಂದುಕೊಂಡಿದ್ದ ಅಮ್ಮುವಿಗೆ ಮುಂದೆ ತನ್ನ ಜೀವನದಲ್ಲೊಂದು ಬರಸಿಡಿಲಿನಂಥಾ ಘಟನೆ ನಡೆಯುತ್ತೆ ಅಂತ ಕನಸಿನಲ್ಲಿಯೂ ಊಹಿಸಿರಲಿಲ್ಲ. ಸದಾ ಹಸನ್ಮುಖಿ, ಕೇಳಿದ್ದನ್ನು ಕೊಡಿಸುತ್ತಿದ್ದ, ಪ್ರೀತಿಯನ್ನೇ ಧಾರೆಯೆರೆದು ಸಾಕಿದ್ದ ತಂದೆ ಅಮ್ಮುವಿನ ಜೊತೆ ಬಾಳ ಹಾದಿಯುದ್ದಕ್ಕೂ ಜೊತೆಯಾಗದೇ ಅರ್ಧ ದಾರಿಯಲ್ಲೇ ಬಿಟ್ಟು ಹೊರಟು ಹೋಗಿದ್ರು. ಅಮ್ಮುವಿನ ಅಮ್ಮ ದಾರಿಕಾಣದೆ ಕಂಗಾಲಾಗಿದ್ರು. ಅಪ್ಪನನ್ನೇ ಉಸಿರಾಗಿಸಿಕೊಂಡಿದ್ದ ಅಮ್ಮು ಅಕ್ಷರಶಃ ಕುಗ್ಗಿ ಹೋಗಿದ್ಳು.. ಮುಂದಿನ ದಾರಿ ಕಾಣದೆ, ಏನು ಮಾಡುವುದೆಂದು ತೋಚದೆ ಕೈಚೆಲ್ಲಿ ಕೂತಿದ್ಳು. ಏನಾದ್ರೂ ಸಾಧಿಸಬೇಕು.. ಗೂಡಿನಿಂದ ಹೊರಗೆ ಹೋಗಿ ಜಗತ್ತನ್ನು ಕಾಣ್ಬೇಕು ಅಂತ ಅಂದುಕೊಂಡಿದ್ದ ಅಮ್ಮು ತಂದೆ ಇಲ್ಲದ ಮೇಲೆ ತಾನು ಬದುಕಿ ತೋರಿಸಬೇಕೆಂದು ನಿರ್ಧಾರ ಮಾಡಿದ್ಳು. ಅಂದೇ ಹೊರ ಜಗತ್ತಿಗೆ ಕಾಲಿಟ್ಟಳು…
Advertisement
ಗೂಡಿನಿಂದ ಪುಟ್ಟ ಹಾರಿ ಪ್ರಪಂಚವನ್ನು ಸುತ್ತಾಡಲು ಹೊರಟ ಹಕ್ಕಿಯಂತೆ ಅಮ್ಮು ಹೊರಟಿದ್ಳು. ಆದ್ರೆ ಪ್ರತಿ ಹೆಜ್ಜೆಯಲ್ಲೂ ಅಮ್ಮುವಿಗೆ ಎದುರಾಗಿದ್ದು ತೊಂದರೆ. ತಂದೆ-ತಾಯಿ ಪ್ರೀತಿ ಕಡಲಲ್ಲಿ ತೇಲಿದ್ದ ಅಮ್ಮುವಿಗೆ ಸಮಾಜದಲ್ಲಿ ಹೆಣ್ಣಿಗೆ ಎದುರಾಗುವ ತೊಂದರೆ ಕುರಿತು ಮೊದಲ ಬಾರಿಗೆ ಅರಿವಾಗಿತ್ತು. ಇಲ್ಲಿವರೆಗೂ ತಂದೆ ತನ್ನನ್ನು ಯಾಕಾಗಿ ಹೊರಜಗತ್ತನ್ನು ಕಾಣೋದಕ್ಕೆ ಬಿಡ್ತಾ ಇರ್ಲಿಲ್ಲ ಅನ್ನೋದು ಅಮ್ಮುವಿಗೆ ಅಂದು ಅರಿವಾಗಿತ್ತು. ಹಿಮ್ಮೆಟ್ಟದ ಅಮ್ಮು ತಂದೆ ಹೇಳಿಕೊಟ್ಟ ಬದುಕಿನ ಪಾಠದಿಂದ ಮುನ್ನುಗ್ಗಿ ಇಂದು ಸಮಾಜದಲ್ಲಿ ಉತ್ತಮ ಮಹಿಳೆ ಎನಿಸಿಕೊಂಡಿದ್ದಾಳೆ.
ಪ್ರತಿ ಹೆಣ್ಣಿಮಕ್ಕಳಿಗೆ ತಾಯಿಯಷ್ಟೆ ಸಮವಾಗಿ ಬದುಕಿನ ಪಾಠವನ್ನು ಒಬ್ಬ ತಂದೆಯೂ ಹೇಳಿಕೊಡುತ್ತಾರೆ. ಮನೆಯಲ್ಲಿನ ಹೆಣ್ಣುಮಕ್ಕಳ ಜವಾಬ್ದಾರಿಯನ್ನು ತಾಯಿ ಹೇಳಿಕೊಟ್ರೆ ಸಮಾಜದಲ್ಲಿ ಹೆಣ್ಣು ಹೇಗೆ ಆತ್ಮವಿಶ್ವಾಸದಿಂದ ಬದುಕ್ಬೇಕು ಅನ್ನೋದನ್ನು ಪ್ರತಿಯೊಬ್ಬ ತಂದೆ ಹೇಳಿಕೊಡುತ್ತಾರೆ. ಇಂದು ಪ್ರತಿಯೊಬ್ಬ ಹೆಣ್ಣು ಸಮಾಜಕ್ಕೆ ಮಾದರಿಯಾಗಿ ನಿಂತಿರುವ ಹಿಂದೆ ಪುರುಷರ ಪಾಲೂ ಅಷ್ಟೇ ಮಹತ್ವದ್ದು..