ಕೊಪ್ಪಳ: ಕುಡುಕ ತಂದೆ ತನ್ನ 7 ತಿಂಗಳ ಹಸುಗೂಸನ್ನು ಮಾರಾಟ ಮಾಡಲು ಯತ್ನಿಸಿದ್ದು, ತಾಯಿಯಿಂದಾಗಿ ಮಾರಾಟ ವಿಚಾರ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆ ಅಣ್ಣಿಗೇರಿ ಗ್ರಾಮದ ಖಾದರ್ ತನ್ನ ಹಸುಗೂಸನ್ನು ಮಾರಲು ಯತ್ನಿಸಿದ ವ್ಯಕ್ತಿ. ಖಾದರ್ ರೂ. 1.50 ಲಕ್ಷಕ್ಕೆ ತನ್ನ ಹಸುಗೂಸನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ.
ಖಾದರ್ ಹುಬ್ಬಳ್ಳಿಯ ಓರ್ವ ವ್ಯಕ್ತಿಗೆ ಹಸುಗೂಸು ಮಾರಾಟ ಮಾಡಲು ಯತ್ನಿಸಿದ್ದಾಗ ಪತ್ನಿ ರುಕ್ಸಾನಾ ಅದನ್ನು ವಿರೋಧಿಸಿದ್ದಾರೆ. ಪತಿಯ ಕೃತ್ಯಕ್ಕೆ ಹೆದರಿ ರುಕ್ಸಾನಾ ತನ್ನ ಮಕ್ಕಳನ್ನು ಕೊಪ್ಪಳದ ತಾಯಿ ಮನೆಯಲ್ಲಿ ಬಿಟ್ಟಿದ್ದರು. ಮಕ್ಕಳನ್ನು ನೋಡಲು ಬಂದವಳಿಗೆ ಸ್ವತಃ ತವರು ಮನೆಯವರೇ ಥಳಿಸುತ್ತಿದ್ದರು. ಮಕ್ಕಳನ್ನು ಹಣಕೊಟ್ಟು ಕರೆದುಕೊಂಡು ಹೋಗು ಎಂದು ಬೆದರಿಸುತ್ತಿದ್ದರು.
ಕೊಪ್ಪಳ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿಗೂ ಬಂದು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಯಾಕೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳಿಯರು ಪ್ರಶ್ನೆ ಮಾಡಿದಾಗ ಮಗನ ಮಾರಾಟದ ವಿಚಾರವನ್ನು ರುಕ್ಸನಾ ಬಾಯಿಬಿಟ್ಟಿದ್ದಾರೆ.
ಸದ್ಯ ರುಕ್ಸನಾ ಮತ್ತು ಮಕ್ಕಳು ಕೊಪ್ಪಳದ ಮಕ್ಕಳ ಸಹಾಯವಾಣಿ ವಶದಲ್ಲಿದ್ದು, ಮಕ್ಕಳ ಸಹಾಯವಾಣಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.