ಕಾಂಗ್ರೆಸ್ ಮುಖಂಡನಿಂದ್ಲೇ ಮಗಳಿಗೆ ಕಿರುಕುಳ- ಪ್ರೀತ್ಸಿ ಮದ್ವೆಯಾದಾಕೆ ತಂದೆಗೆ ಮನವಿ

Public TV
2 Min Read
HVR Love kirik 1 2

ಹಾವೇರಿ: ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಮಗಳಿಗೆ ಕಾಂಗ್ರೆಸ್ ಮುಖಂಡನೊಬ್ಬ ಕಿರುಕುಳ ಕೊಡುತ್ತಿದ್ದು, ರಕ್ಷಣೆಕೋರಿ ಹಾವೇರಿ ಎಸ್‍ಪಿ ಕಚೇರಿಗೆ ನವಜೋಡಿ ಆಗಮಿಸಿದ್ದಾರೆ.

ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕೆರೆಮಲ್ಲಾಪುರದ ಜಯವರ್ದನ್ ಹಾಗೂ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ನಿಖಿತಾ ಮಹಾನಶೆಟ್ಟರ್ ಪರಸ್ಪರ ಪ್ರೀತಿ ಮದುವೆಯಾಗಿದ್ದಾರೆ. ನನ್ನ ತಂದೆ ಶಿವಪ್ರಕಾಶ್ ಅವರು ಕಾಂಗ್ರೆಸ್ ಮುಖಂಡ ಹಾಗೂ ಗದಗಿನ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ. ಅವರಿಗೆ ಇರುವ ಅಧಿಕಾರ ದುರುಪಯೋಗ ಮಾಡಿಕೊಂಡು ಇಬ್ಬರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ನಿಖಿತಾ ದೂರಿದ್ದಾರೆ.

HVR Love kirik

ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಚೆನ್ನಾಗಿ ಬದುಕುತ್ತೇವೆ. ನಮ್ಮ ಮೇಲಿನ ದ್ವೇಷಕ್ಕೆ ಬೇರೆಯವರಿಗೆ ತೊಂದರೆ ಕೊಡಬೇಡಿ ಅಂತಾ ನಿಖಿತಾ ತಂದೆಗೆ ಮನವಿ ಮಾಡಿಕೊಂಡಿದ್ದಾಳೆ.

ಏನಿದು ಪ್ರಕರಣ?:
ನಾನು ಮತ್ತು ಜಯವರ್ದನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಈ ಕುರಿತು ಆರು ತಿಂಗಳ ಹಿಂದೆಯೇ ತಂದೆಗೆ ಹೇಳಿದ್ದೆ. ಆದರೆ ಅದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ನಾವು ನವಂಬರ್ 16ರಂದು ರಿಜಿಸ್ಟರ್ ಮದುವೆಯಾಗಿದ್ದೇವೆ. ನಿಖಿತಾರನ್ನು ಅಪಹರಣ ಮಾಡಲಾಗಿದೆ ಅಂತಾ ಆರೋಪಿಸಿ ಶಿವಪ್ರಕಾಶ್ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಜಯವರ್ದನ್ ಅವರ ಮಾವನನ್ನು ಬಂಧಿಸಿ, ಕಿರುಕುಳ ನೀಡುತ್ತಿದ್ದಾರೆ. ರಿಜಿಸ್ಟರ್ ಆಫೀಸ್‍ನಲ್ಲಿ ನಮ್ಮ ಮದುವೆಗೆ ಸಹಿ ಹಾಕಿದವರಿಗೆ ತೊಂದರೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನನ್ನ ಗೆಳತಿಯ ಮನೆಗೆ ಹೋಗಿ ಅವರ ತಾಯಿಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅವರಿಗೆ ಇರುವ ರಾಜಕೀಯ ಶಕ್ತಿ ಬಳಸಿಕೊಂಡು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ನಿಖಿತಾ ದೂರಿದ್ದಾರೆ.

HVR Love kirik 3

ನಮ್ಮ ತಾಯಿಯ ತವರುಮನೆ ಬೆಳ್ಳಟ್ಟಿ. ಅಲ್ಲಿಯೇ ನಾನು ಬೆಳೆದಿದ್ದು. ಅದೇ ಊರಿನ ನಿಖಿತಾ ಜೊತೆಗೆ ಪರಿಚಯ ಕೂಡ ಆಗಿತ್ತು. ಬಳಿಕ ಪರಸ್ಪರ ಪ್ರೀತಿ ಮಾಡಿದೇವು. ಈ ಕುರಿತು ನಿಖಿತಾ ಮನೆಯವರಿಗೆ ತಿಳಿಸಲಾಗಿತ್ತು. ಆದರೆ ಅವರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಮನೆಯವರ ವಿರೋಧದ ನಡುವೆಯೂ ರಿಜಿಸ್ಟರ್ ಮದುವೆ ಆಗಿದ್ದಕ್ಕೆ ನಮ್ಮನ್ನು ಹತ್ಯೆ ಮಾಡಲು ಶಿವಪ್ರಕಾಶ್ ಯತ್ನಿಸಿದ್ದರು. ಇಬ್ಬರೂ ತಪ್ಪಿಸಿಕೊಂಡು ಕಾಲ ಕಳೆಯುತ್ತಿದ್ದೇವು ಎಂದು ಜಯವರ್ದನ್ ತಿಳಿಸಿದರು.

HVR Love kirik 4

ಶಿವಪ್ರಕಾಶ್ ಅವರು ನಮ್ಮ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ತೊಂದರೆ ಕೊಡುತ್ತಿದ್ದಾರೆ. ರಾಜಕೀಯ ಬಲ ಬಳಸಿಕೊಂಡು ನಮ್ಮನ್ನು ಶಿರಹಟ್ಟಿಗೆ ಕರೆಸಿಕೊಂಡು, ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತು ಜೀವ ರಕ್ಷಣೆ ಕೇಳಿಕೊಂಡು ಹಾವೇರಿ ಎಸ್‍ಪಿ ಕಚೇರಿಗೆ ಬಂದಿದ್ದೇವೆ ಎಂದು ಜಯವರ್ದನ್ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *