– ಆಸ್ಪತ್ರೆಗೆ ದಾಖಲಿಸದೇ ಮಗಳನ್ನ ಕೂಡಿ ಹಾಕಿದ ತಾಯಿ
ಚಂಡೀಗಢ: ಕ್ರೂರಿ ತಂದೆಯೊಬ್ಬ ತನ್ನ 18 ವರ್ಷದ ಮಗಳ ಮುಖ, ಕೈಗಳ ಮೇಲೆ ಇಕ್ಕಳದಿಂದ ಬರೆ ಹಾಕಿರುವ ಘಟನೆ ಪಂಜಾಬ್ ರಾಜ್ಯದ ರಾಮದರ್ಬಾರ್ ಎಂಬಲ್ಲಿ ನಡೆದಿದೆ.
ಸದ್ಯ ಆರೋಪಿ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಾಗಿದೆ. ತಂದೆ ಮಗಳ ಮೇಲೆ ಹಲ್ಲೆ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ತಾಯಿ ಪುತ್ರಿಯ ರಕ್ಷಣೆಗೆ ಮುಂದಾಗದೇ ಪತಿಯ ಬೆಂಬಲಕ್ಕೆ ನಿಂತಿದ್ದಾಳೆ. ತಂದೆ ಬರೆ ಹಾಕಿದ ಮೇಲೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸದೇ ಕೋಣೆಯಲ್ಲಿ ಕೂಡಿ ಹಾಕಿದ್ದಾಳೆ.
ಹಲ್ಲೆಗೊಳಗಾದ ಯುವತಿ ನೋವಿನಿಂದ ಕಿರುಚಾಡೋದನ್ನು ಕೇಳಿಸಿಕೊಂಡ ನೆರೆಹೊರೆಯವರು ಮನೆಗೆ ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಗಿದ್ದೇನು?
ಯುವತಿ ಬೆಳಗ್ಗೆ ತನ್ನ ಚಿಕ್ಕಮ್ಮನ ಮನೆಗೆ ಹೋಗಬೇಕೆಂದು ಹಠ ಹಿಡಿದಿದ್ದಳು. ಎಲ್ಲಿಯೂ ಹೋಗಬಾರದು ಅಂತಾ ಹೇಳಿ ಪೋಷಕರು ಕೆಲಸಕ್ಕೆ ತೆರಳಿದ್ದರು. ಮನೆಗೆ ಹಿಂದಿರುಗಿದಾಗ ಮಗಳು ಚಿಕ್ಕಮ್ಮನ ಮನೆಗೆ ಹೋಗಿರುವ ವಿಚಾರ ತಿಳಿದಿದೆ. ಇದ್ರಿಂದ ಕೋಪಗೊಂಡ ತಂದೆ ಮನೆಗೆ ಬಂದ ಮಗಳಿಗೆ ಬರೆ ಹಾಕಿದ್ದಾನೆ.
ಬರೆ ಹಾಕಿದ ಪರಿಣಾಮ ಯುವತಿಯ ಕೆನ್ನೆ ಭಾಗದ ಚರ್ಮ ಸಂಪೂರ್ಣ ಸುಟ್ಟುಹೋಗಿದ್ದು, ಮಾತನಾಡಲು ಸಹ ಕಷ್ಟಪಡುತ್ತಿದ್ದಾಳೆ. ಠಾಣೆಯಲ್ಲಿ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಯುವತಿಯ ತಂದೆ ಪರಾರಿಯಾಗಿದ್ದಾನೆ. ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಆದಷ್ಟು ಬೇಗ ಕ್ರೂರಿ ತಂದೆಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv