ಬಟ್ಟೆಯಿಂದ ಮಗನ ಕಟ್ಟಿಕೊಂಡು ನದಿಗೆ ಹಾರಿದ್ದ ತಂದೆ – 12 ದಿನದ ನಂತ್ರ ಶವ ಪತ್ತೆ

Public TV
2 Min Read
UDP 01

– ನಾನೊಬ್ಬ ಮಗನನ್ನ ಕೊಲ್ಲುವ ಮಹಾ ಪಾಪಿ
– ಡೆತ್‍ನೋಟ್ ಬರೆದಿದ್ದ ತಂದೆ

ಉಡುಪಿ: ಆರು ವರ್ಷದ ಮಗನನ್ನು ಕಟ್ಟಿಕೊಂಡು ನೇತ್ರಾವತಿ ನದಿಗೆ ಹಾರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮೃತದೇಹಗಳು ಉಡುಪಿಯಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ನೇತ್ರಾವತಿ ನದಿಗೆ ಹಾರಿದ್ದ ತಂದೆ ಮಗನ ಶವ ಸುಮಾರು 65 ಕಿ.ಮೀ ದೂರದ ಉಡುಪಿ ಜಿಲ್ಲೆಯ ಕಟಪಾಡಿ ಸಮುದ್ರ ಕಿನಾರೆಗೆ ತೇಲಿ ಬಂದಿದೆ.

ಗೋಪಾಲಕೃಷ್ಣ ರೈ ಹಾಗೂ ಪುತ್ರ ಅನೀಶ್ ರೈ ಮೃತ ತಂದೆ-ಮಗ. 12 ದಿನದ ನಂತರ ಕಟಪಾಡಿ ಸಮೀಪ ತಂದೆ ಮಗನ ಶವ ಕೊಳೆತ ಸ್ಥಿತಿಯಲ್ಲಿ ಒಟ್ಟಿಗೆ ಸಿಕ್ಕಿವೆ.

udp 2

ಏನಿದು ಪ್ರಕರಣ?
ಫೆಬ್ರವರಿ 16ರ ಮುಂಜಾನೆ 4.30ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ತಂದೆ ಹಾಗೂ ಪುತ್ರ ರಾಷ್ಟ್ರೀಯ ಹೆದ್ದಾರಿ 66ರಿಂದ ಕಣ್ಮರೆಯಾಗಿದ್ದರು. ನಾಪತ್ತೆಯಾದವರನ್ನು ಬಂಟ್ವಾಳದ ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ ಹಾಗೂ ಪುತ್ರ ಅನೀಶ್ ರೈ ಎಂದು ಗುರುತಿಸಲಾಗಿತ್ತು. ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ ಮುಂಬೈಯಿಂದ ಕೊಣಾಜೆಯ ಪಾವೂರಿಗೆ ಸಂಬಂಧಿಕರ ಮನೆಗೆ ದೈವದ ನೇಮೋತ್ಸವಕ್ಕೆ ಬಂದಿದ್ದನು. ಭಾನುವಾರ ನಸುಕಿನ ಜಾವ 4.30ರ ವೇಳೆ ಮಗ ಅನೀಶ್ ರೈಯೊಂದಿಗೆ ಗೋಪಾಕೃಷ್ಣ ರೈ ಕಾರು ಚಲಾಯಿಸಿ ಮನೆಯಿಂದ ಹೊರಗೆ ಹೊರಟಿದ್ದನು.

udp 11

ಈ ಕಾರು ಫೆಬ್ರವರಿ 16 ರಂದು ಭಾನುವಾರ ಬೆಳಗ್ಗಿನ ಜಾವ ಉಳ್ಳಾಲ ನೇತ್ರಾವತಿ ನದಿಯ ಸೇತುವೆ ಬಳಿ ಪತ್ತೆಯಾಗಿತ್ತು. ನೇತ್ರಾವತಿ ಸೇತುವೆಯಲ್ಲಿ ಕಾರು ನಿಂತಿದ್ದು, ವಾಹನದಲ್ಲಿ ಯಾರೂ ಇಲ್ಲದ್ದು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದರು. “ತನಗೆ ಒಂದು ವಾರದಿಂದ ನಿದ್ರೆ ಬರುತ್ತಿಲ್ಲ. ನಾನೊಬ್ಬ ಮಗನನ್ನು ಕೊಲ್ಲುವ ಮಹಾ ಪಾಪಿ. ಇದಕ್ಕಾಗಿ ನನ್ನ ಕ್ಷಮಿಸಿರಿ. ಪತ್ನಿ ಅಶ್ವಿನಿ ರೈ ನಿನ್ನನ್ನು ಬಿಟ್ಟು ಇಬ್ಬರೂ ದೂರ ಹೋಗುತ್ತಿದ್ದೇವೆ ಎಂದು ಡೆತ್‍ನೋಟ್” ಬರೆದಿಟ್ಟಿದ್ದನು. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಕ್ಕಾಗಿ ರಾತ್ರಿ ಹಗಲು ಶೋಧಕಾರ್ಯ ನಡೆಸಿದ್ದರು.

udp 1 1

ಘಟನೆಗೆ ಸಂಬಂಧಿಸಿದಂತೆ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಆದರೆ ಶುಕ್ರವಾರ ರಾತ್ರಿ ಕಟಪಾಡಿ ಸಮೀಪ ತಂದೆ ಮಗನ ಶವ ಕೊಳೆತ ಸ್ಥಿತಿಯಲ್ಲಿ ಒಟ್ಟಿಗೆ ಸಿಕ್ಕಿವೆ. ಕುಟುಂಬಸ್ಥರು ಮೃತದೇಹಗಳ ಗುರುತು ಪತ್ತೆ ಮಾಡಿದ್ದಾರೆ. ತಂದೆ ಮಗ ಬಟ್ಟೆ ಸುತ್ತಿಕೊಂಡು ನೀರಿಗೆ ಹಾರಿದ್ದಾರೆ ಎಂದು ಮೃತದೇಹ ಮೇಲಕ್ಕೆತ್ತಿದವರು ಮಾಹಿತಿ ನೀಡಿದ್ದಾರೆ. ಮೃತದೇಹ 12 ದಿನ ನೀರನಲ್ಲಿದ್ದರಿಂದ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಉಡುಪಿಯ ಅಜ್ಜರಕಾಡು ಶವಾಗಾರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳೂರಿಗೆ ರವಾನಿಸಲಾಗಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

udp 2 1

ಆಪತ್ಬಾಂಧವ ಕಾಪು ಸೂರಿ ಶೆಟ್ಟಿ ಮಾತನಾಡಿ, ಶವ ಕಲ್ಲುಗಳ ನಡುವೆ ಸಿಲುಕಿತ್ತು. ಮೇಲೆತ್ತಲು ಬಹಳ ಕಷ್ಟವಾಯಿತು. ಜೊತೆಗೆ ಪ್ರಾಣ ಕಳೆದುಕೊಳ್ಳುವ ಉದ್ದೇಶದಿಂದ ಬಟ್ಟೆಯಿಂದ ಪರಸ್ಪರ ಸುತ್ತಿಕೊಂಡಿದ್ದರು. ಅಂತ್ಯಸಂಸ್ಕಾರ ಕೂಡ ಜೊತೆಗೆ ಆಗಬೇಕೆಂಬ ಇಚ್ಛೆ ಅವರದ್ದಾಗಿತ್ತು ಅಂತ ಕುಟುಂಬಸ್ಥರು ಹೇಳಿದ್ದಾರೆ ಎಂದರು.

ಮೃತರ ಸಹೋದರ ಹರೀಶ್ ರೈ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇ ಇರಲಿಲ್ಲ. ಆರ್ಥಿಕ, ಕೌಟುಂಬಿಕ ಸಮಸ್ಯೆಗಳೂ ಇರಲಿಲ್ಲ. ಯಾಕೆ ಹೀಗೆ ಮಾಡಿಕೊಂಡರು ಎಂದು  ಗೊತ್ತಾಗುತ್ತಿಲ್ಲ ಎಂದರು.

udp 3

 

Share This Article
Leave a Comment

Leave a Reply

Your email address will not be published. Required fields are marked *