ಬಾಗಲಕೋಟೆ: ಪಬ್ಲಿಕ್ ಟಿವಿ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯಿಂದ ಪ್ರವಾಹದಲ್ಲಿ ಸಿಲುಕಿದ್ದ ತಂದೆ-ಮಗನನ್ನ ಎಸ್‍ಡಿಆರ್‍ಎಫ್ ತಂಡ ಸುರಕ್ಷಿತವಾಗಿ ಮರಳಿ ತಂದಿದೆ.
ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮುಧೋಳ ತಾಲೂಕಿನ ಚಿಚಕಂಡಿ ಸೇತುವೆ ಮುಳುಗಡೆಯಾಗಿತ್ತು. ಸೇತುವೆ ಮೇಲೆ ನೀರು ಬರುತ್ತದೆ ಎನ್ನುವ ವಿಷಯ ತಿಳಿದ ಜೀರಗಾಳ ಗ್ರಾಮದ ಶ್ರೀಶೈಲ ಉಪ್ಪಾರ್ ಹಾಗೂ ಮಗ ರಮೇಶ್ ಹೊಲದಲ್ಲಿ ಕಟ್ಟಲಾಗಿದ್ದ ದನಗಳನ್ನ ಹೊರತರಲು ಹೋದಾಗ ಪ್ರವಾಹಕ್ಕೆ ಸಿಲುಕಿ ಜೀವಭಯದಲ್ಲಿದ್ದರು.
ಈ ವಿಚಾರ ತಿಳಿದು ಪಬ್ಲಿಕ್ ಟಿವಿ ಪ್ರತಿನಿಧಿ ರವಿ ಹಳ್ಳೂರ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ, ರಕ್ಷಣಾ ಕಾರ್ಯಕ್ಕೆ ಮುಂದಾಗುವಂತೆ ಮನವಿ ಮಾಡಿದ್ದರು. ಪರಿಣಾಮ, ಎಸ್‍ಡಿಆರ್‍ಎಫ್ ತಂಡ ಸ್ಥಳಕ್ಕೆ ಆಗಮಿಸಿ ಪ್ರವಾಹದಲ್ಲಿ ಸಿಲುಕಿದ್ದ ತಂದೆ ಮಗನನ್ನು ರಕ್ಷಿಸಿದ್ದಾರೆ.
ಹಿರಣ್ಯಕೇಶಿ, ಮಾರ್ಕಂಡೇಯ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಘಟಪ್ರಭಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮೇಲೆ ಸುಮಾರು ಎಂಟು ಅಡಿಯಷ್ಟು ನೀರು ಹರಿಯುತ್ತಿದೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.