ಧಾರವಾಡ: ಕುಟುಂಬಸ್ಥರಿಗೆ ತಂದೆ ಕಿರಿಕಿರಿ ಮಾಡುತ್ತಿದ್ದರು ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿ, ಬಳಿಕ ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನುಮಂತಪ್ಪ ಕಿರೇಸೂರ ಮೃತ ದುರ್ದೈವಿ. ರಮೇಶ್ ಕಿರೇಸೂರ ತಂದೆಯನ್ನೆ ಕೊಲೆ ಮಾಡಿದ್ದ ಪಾಪಿ ಮಗ. ಕೊಲೆ ಮಾಡಲು ಆರೋಪಿಗೆ ಸೋದರ ಸಂಬಂಧಿಗಳಾದ ವೆಂಕಪ್ಪ ಮತ್ತು ಸತ್ಯಪ್ಪ ಸಾಥ್ ಕೊಟ್ಟಿದ್ದಾರೆ.
ಅಕ್ಟೋಬರ್ ೨೭ರಂದು ಜಾವೂರ-ಹಂಚಿನಾಳ ರಸ್ತೆ ಮಧ್ಯೆ ಹನುಮಂತಪ್ಪ ಅವರ ಶವ ಪತ್ತೆಯಾಗಿತ್ತು. ಅಲ್ಲದೆ ನಮ್ಮ ತಂದೆಗೆ ಅಪಘಾತವಾಗಿದೆ ಎಂದು ರಮೇಶ್ ಪೊಲೀಸರಿಗೆ ದೂರು ನೀಡಿದ್ದನು. ಪತ್ತೆಯಾದ ಶವದ ಸ್ವರೂಪ ನೋಡಿದ ನವಲಗುಂದ ಪೊಲೀಸರು ಅನುಮಾನಗೊಂಡು, ಇದು ಅಪಘಾತವಲ್ಲ ಕೊಲೆ ಎಂದು ಶಂಕಿಸಿ ತನಿಖೆ ಕೈಗೊಂಡಿದ್ದರು.
ಪೊಲೀಸರು ಪ್ರಕರಣ ಸಂಬಂಧ ಕುಟುಂಬಸ್ಥರ ವಿಚಾರಣೆ ನಡೆಸಿದಾಗ ಆರೋಪಿ ಮಗ ಸಿಕ್ಕಿಬಿದ್ದಿದ್ದಾನೆ. ಕುಟುಂಬ ಸದಸ್ಯರಿಗೆ ಕಿರಿಕಿರಿ ಮಾಡುತ್ತಿದ್ದ ಎಂಬ ಕಾರಣಕ್ಕೆ ತಂದೆಯನ್ನ ಕೊಲೆ ಮಾಡಿ, ಬಳಿಕ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಜಾಣತನ ಪ್ರದರ್ಶಿಸಿ ಮಗ ಖಾಕಿ ಅತಿಥಿಯಾಗಿದ್ದಾನೆ.
ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ನವಲಗುಂದ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.