ಭೋಪಾಲ್: ಅಪಘಾತದಲ್ಲಿ ಮೃತಪಟ್ಟ ಮಗನ ಸಾವಿನಿಂದ ಮನನೊಂದು ತಂದೆಯೊಬ್ಬರು ಮಧ್ಯಪ್ರದೇಶದ ದಾಮೋಹದಲ್ಲಿ ಯುವಕರಿಗೆ ಹೆಲ್ಮೆಟ್ ವಿತರಿಸಿ ರಸ್ತೆ ಜಾಗೃತಿ ಮೂಡಿಸುತ್ತಿದ್ದಾರೆ.
25 ವರ್ಷದ ಲಕ್ಕಿ ದೀಕ್ಷಿತ್ ನವೆಂಬರ್ 20ರಂದು ಅಪಘಾತಕ್ಕೊಳಗಾಗಿದ್ದರು. ಲಕ್ಕಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದಾರೆ. ಪರಿಣಾಮ ಅಪಘಾತದಿಂದ ಲಕ್ಕಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಲಕ್ಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Advertisement
ಈ ಬಗ್ಗೆ ಲಕ್ಕಿ ಅವರ ತಂದೆ ಮಹೇಂದ್ರ ದೀಕ್ಷಿತ್ ಮಾತನಾಡಿ, ನನ್ನ ರೀತಿ ಬೇರೆ ತಂದೆ-ತಾಯಿಯಂದಿರು ತನ್ನ ಮಕ್ಕಳನ್ನು ಕಳೆದುಕೊಂಡು ದುಃಖ ಅನುಭವಿಸುವುದು ಇಷ್ಟವಿಲ್ಲ. ನನ್ನ ಮಗ ಹೆಲ್ಮೆಟ್ ಧರಿಸದ ಕಾರಣ ಅಪಘಾತದಲ್ಲಿ ಮೃತಪಟ್ಟಿದ್ದನು. ಅಪಘಾತದಲ್ಲಿ ಆತನಿಗೆ ಗಂಭೀರ ಗಾಯಗಳಾಗಿತ್ತು. ಹಾಗಾಗಿ ನಾನು 18 ವರ್ಷ ಮೇಲ್ಪಟ್ಟ ಯುವಕರಿಗೆ ಹೆಲ್ಮೆಟ್ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇನೆ ಎಂದಿದ್ದಾರೆ.
Advertisement
Advertisement
ಇದೇ ವೇಳೆ ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಿದ ಮಹೇಂದ್ರ ಅವರು, ನಮ್ಮ ರಕ್ಷಣೆಗಾಗಿ ನಾವು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂದು ಎಲ್ಲರಿಗೂ ಸಲಹೆ ನೀಡಿದ್ದಾರೆ. ಜೊತೆಗೆ ಹೆಲ್ಮೆಟ್ ಇಲ್ಲದೆ ನಿಮ್ಮ ಮಕ್ಕಳನ್ನು ಹೊರಗೆ ಕಳುಹಿಸಬೇಡಿ ಎಂದು ನಾನು ಎಲ್ಲಾ ತಂದೆ-ತಾಯಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
Advertisement
ಮಹೇಂದ್ರ ಅವರ ಈ ನಿರ್ಧಾರಕ್ಕೆ ಅವರ ಸಂಬಂಧಿಕರೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು ತಾವು ಅನುಭವಿಸುತ್ತಿರುವ ನೋವಿನಿಂದ ಹೊರಬರಲು ಸಾಧ್ಯವಾಗದಿರುವ ಸಮಯದಲ್ಲಿ ಟ್ರಾಫಿಕ್ ನಿಯಮ ಹಾಗೂ ರಸ್ತೆ ಸುರಕ್ಷಿತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಬೇರೆ ಮಕ್ಕಳು ಕೂಡ ಇಂತಹ ಸ್ಥಿತಿ ಎದುರಿಸಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ. ಈ ಘಟನೆಯಿಂದ ಲಕ್ಕಿ ಸ್ನೇಹಿತರು ಟ್ರಾಫಿಕ್ ನಿಯಮಗಳನ್ನು ಪಾಲಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಬೈಕಿನಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುವುದಿಲ್ಲ ಎಂದು ಮಾತು ನೀಡಿದ್ದಾರೆ ಎಂದು ಮಹೇಂದ್ರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.