ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

Public TV
3 Min Read
blg pubg 1

– ಯುವಕನ ವಿಕೃತ ಮನಸ್ಥಿತಿ ಕಂಡು ದಂಗಾದ ಸ್ಥಳೀಯರು
– ರಕ್ತ ಬೇಕೆಂದು ಪಕ್ಕದ ನಿವಾಸಿಗಳ ಬಾಗಿಲು ಬಡಿದಿದ್ದ ಯುವಕ
– ಇಳಿಗೆ ಮಣೆಯಿಂದ ತಂದೆಯ ದೇಹವನ್ನು ಕತ್ತರಿಸಿ ಛಿದ್ರಗೊಳಿಸಿದ

ಬೆಳಗಾವಿ: ಯವಕನೋರ್ವ ಪಬ್‍ಜಿ ಆಡಲು ಇಂಟರ್‌ನೆಟ್ ಪ್ಯಾಕ್ ಹಾಕಿಸಲು ಹಣ ಕೊಡದ ತಂದೆಯನ್ನೇ ಕೊಲೆ ಮಾಡಿರುವ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಆರೋಪಿಯ ವಿಚಿತ್ರ ವರ್ತನೆ ಕಂಡು ಸ್ವತಃ ಪೊಲೀಸರೇ ದಂಗಾಗಿದ್ದಾರೆ.

blg pub g 5

ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾಕತಿಯ ನಿವಾಸಿ ಶಂಕ್ರಪ್ಪ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರ್ ಎರಡನೇ ವರ್ಷ ಓದುತ್ತಿದ್ದ ಆರೋಪಿ ರಘುವೀರ್ ಕಳೆದ ನಾಲ್ಕೈದು ವರ್ಷಗಳಿಂದ ಮೊಬೈಲ್ ಗೇಮ್‍ಗಳನ್ನು ಆಡುವ ಗೀಳಿಗೆ ಬಿದ್ದಿದ್ದನು. ಪಾಲಕರು ಎಷ್ಟೇ ಕಿವಿ ಮಾತು ಹೇಳಿದರೂ ಕೇಳದ ಯುವಕ ಗೇಮ್ ಹುಚ್ಚಿಗೆ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ.

blg pubg

ಕಳದೆ ಮೂರು ದಿನಗಳ ಹಿಂದೆ ಏಕಾಏಕಿ ರಾತ್ರಿಯಲ್ಲಿ ಪಕ್ಕದ ಮನೆಗಳ ಬಾಗಿಲು ಬಡಿದು ನನಗೆ ರಕ್ತ ಬೇಕು ರಕ್ತ ಎಂದು ರಘುವೀರ್ ವಿಚಿತ್ರವಾಗಿ ವರ್ತಿಸಿದ ಘಟನೆ ಬಗ್ಗೆ ಸ್ಥಳೀಯರು ಬಾಯಿಬಿಟ್ಟಿದ್ದಾರೆ. ರಘುವೀರ್ ಈ ರೀತಿ ಕೂಗುತ್ತ ಗಲಾಟೆ ಮಾಡಿದಾಗ ಯಾರು ಬಾಗಿಲು ತೆರೆಯಲಿಲ್ಲ. ಆಗ ಮನೆಯೊಂದರ ಕಿಟಕಿಯನ್ನು ಕೈಯಿಂದ ಒಡೆದು ಆತ ಗಲಾಟೆ ಮಾಡಿದ್ದನು. ಈ ಘಟನೆಯಲ್ಲಿ ಆರೋಪಿ ಕೈಗೆ ಬಲವಾದ ಏಟು ಬಿದ್ದು, ಕೈ ಕೆಲಭಾಗ ಸೀಳಿ ಹೋಗಿತ್ತು. ಮರುದಿನ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಸೇರಿ ಯುವಕನ ವಿರುದ್ಧ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ತಂದೆ ಶಂಕ್ರಪ್ಪ ಜೊತೆ ರಘುವೀರ್ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ಎಲ್ಲರನ್ನು ದೂಡಿ ಓಡಿಹೋಗಿದ್ದ. ನಂತರ ಸಂಬಂಧಿಗಳು, ತಂದೆ ತಾಯಿ ಹೇಗೋ ಆತನನ್ನು ಸಮಾಧಾನ ಮಾಡಿ ಭಾನುವಾರ ಠಾಣೆಗೆ ಕರೆತಂದಿದ್ದರು. ಆಗ ಪೊಲೀಸರು ಆತನಿಗೆ ಬುದ್ಧಿವಾದ ಹೇಳಿ ಮರಳಿ ಕಳುಹಿಸಿದ್ದರು.

blg pubg 3

ಮನೆಗೆ ಬಂದ ನಂತರ ಆರೋಪಿ ಮೊಬೈಲ್ ಹಿಡಿದು ಮತ್ತೆ ಗೇಮ್ ಆಡಲು ಆರಂಭಿಸಿದ್ದ. ಆಗ ಗಾಯದ ಕೈಗೆ ಕಟ್ಟಿದ ಬ್ಯಾಂಡೇಜ್ ಸರಿ ಮಾಡಲು ತಂದೆ-ತಾಯಿ ಹೋದಾಗ ಅವರನ್ನು ಆತ ಹೊಡೆಯಲಾರಂಭಿಸಿದ್ದಾನೆ. ಕಳೆದ ರಾತ್ರಿಯಿಂದ ಹಾಲ್‍ನಲ್ಲಿ ಮಲಗಿದ್ದ ರಘುವೀರ್ ಏನೇನೊ ಬಡಬಡಿಸುತ್ತಿದ್ದ. ಆಗ ಸರಿ ಸುಮಾರು ರಾತ್ರಿ 2 ಗಂಟೆ ಸಮಯವಾಗಿತ್ತು. ಆಗ ತಂದೆ-ತಾಯಿ ಮಗನ ಕೈಯಿಂದ ರಕ್ತ ಸುರಿಯುತ್ತಿರುವುದನ್ನು ನೋಡಿದ್ದಾರೆ. ಆ ರಕ್ತದಲ್ಲಿಯೇ ಮಗ ಆಟವಾಡುತ್ತಿರುವುದನ್ನು ಕಂಡ ತಂದೆ-ತಾಯಿ ಸುಮಾರು 3 ಗಂಟೆಯವರೆಗೆ ಆತನಿಗೆ ಬುದ್ಧಿ ಹೇಳಿದ್ದಾರೆ. ಈ ಕಾರಣಕ್ಕೆ 3:30ರ ಹೊತ್ತಿಗೆ ತಂದೆ-ತಾಯಿಯ ಜೊತೆ ಆರೋಪಿ ಜಗಳ ಆರಂಭಿಸಿದ್ದಾನೆ. 4 ಗಂಟೆ ಸುಮಾರಿಗೆ ತಾಯಿಯನ್ನು ಕೊಠಡಿಗೆ ತಳ್ಳಿ ಲಾಕ್ ಮಾಡಿ, 4:30ರ ವೇಳೆಗೆ ತಂದೆಯ ಮೇಲೆ ಎಗರಿ, ಕೈಗೆ ಬ್ಯಾಂಡೇಜ್ ಕಟ್ಟಿದ ದಾರದಿಂದಲೇ ತಂದೆಯ ಕುತ್ತಿಗೆಗೆ ಸುತ್ತಿ ಜೋರಾಗಿ ಬಿಗಿದು ಕೊಲೆಗೆ ಯತ್ನಿಸಿದ್ದಾನೆ.

blg pubg 4

ತಂದೆ ಜೋರಾಗಿ ಕೂಗಾಡಿದಾಗ ಕೊಠಡಿ ಒಳಗಿಂದ ತಾಯಿ ಕೂಡ ಕಾಪಾಡಿ ಎಂದು ಜೋರಾಗಿ ಕಿರುಚಿದ್ದಾರೆ. ಈ ವೇಳೆ ಅಕ್ಕಪಕ್ಕದ ಮನೆಯವರು ಮನೆಯ ಬಾಗಿಲು ಒಡೆದು ಒಳನುಗ್ಗಲು ಮುಂದಾಗಿದ್ದರು. ಆಗ ಕೆಲವರು ಕಿಟಕಿಯಲ್ಲಿ ಏನಾಗುತ್ತಿದೆ ಎಂದು ನೋಡಲು ಹೋಗಿ ರಘುವೀರ್ ನ ವಿಕೃತಿ ನೋಡಿ ಭಯಗೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತರಕಾರಿ ಕತ್ತರಿಸುವ ಹಾಗೆ ತಂದೆಯ ರುಂಡವನ್ನು, ಕಾಲನ್ನು ಪಾಪಿ ಮಗ ಕತ್ತರಿಸಿರುವುದನ್ನು ನೋಡಿ ಹೆದರಿದ್ದಾರೆ. ಮೊದಲು ಕತ್ತರಿಯಿಂದ ತಂದೆಯ ಕುತ್ತಿಗೆಯನ್ನು ಕತ್ತರಿಸಲು ರಘುವೀರ್ ಪ್ರಯತ್ನ ಮಾಡಿ, ನಂತರ ಇಳಿಗೆ ಮಣೆ ತಂದು ತಂದೆಯ ರುಂಡವನ್ನು ಕಟ್ ಮಾಡಿದ್ದಾನೆ. ನಂತರ ತಂದೆಯ ದೇಹವನ್ನು ಛಿದ್ರಛಿದ್ರ ಮಾಡಿದ್ದಾನೆ.

blg pubg 2

ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಕೃತ್ಯ ನೋಡಿ ದಂಗಾಗಿ ಹೋಗಿದ್ದಾರೆ. ಬಾಗಿಲು ಒದ್ದು ರಘುವಿರ್ ನನ್ನು ಹಿಡಿಯಲು ಹರಸಾಹಸ ಮಾಡಿದ್ದಾರೆ. ಆಗ ಕೈಯಲ್ಲಿ ಇಳಿಗೆ ಮಣೆ ಹಿಡಿದು ಹುಚ್ಚುಚ್ಚಾಗಿ ಮಾತನಾಡುತ್ತಿದ್ದ ಆರೋಪಿಯನ್ನು ಕಂಡು ನಮ್ಮ ಮೇಲೆಯೇ ಹಲ್ಲೆ ಮಾಡುತ್ತಾನೆ ಎಂದು ಯೋಚಿಸಿದ ಪೊಲೀಸರು, ಒಂದು ಬಟ್ಟೆಯನ್ನು ಅವನ ಮುಖದ ಮೇಲೆ ಎಸೆದು, ಬಳಿಕ ಎಲ್ಲರೂ ಸೇರಿ ಆತನನ್ನು ಹಿಡಿದಿದ್ದಾರೆ. ಸರಿ ಸುಮಾರು ಬೆಳಗ್ಗಿನ ಜಾವ 5 ಗಂಟೆಯ ವೇಳೆ ಪೊಲೀಸರು ಯಶಸ್ವಿಯಾಗಿ ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *