ನವದೆಹಲಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆಯಾಗಿದ್ದ ಫೋಟೋಗ್ರಾಫರ್ ಅಂಕಿತ್ ಸಕ್ಸೆನಾ ಮನೆಯಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಫೆಬ್ರವರಿ 1ರಂದು ಪಶ್ಚಿಮ ದೆಹಲಿಯಲ್ಲಿ ಅಂಕಿತ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಅಂಕಿತ್ ತನ್ನದೇ ನಗರದ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಅಂಕಿತ್ ತಂದೆ ಯಶ್‍ಪಾಲ್ ಸಕ್ಸೆನಾ, ರಂಜಾನ್ ತಿಂಗಳಲ್ಲಿ ಉಪವಾಸವಿರುವ ಮುಸ್ಲಿಂ ಸಮುದಾಯದ ಜನರಿಗೆ ಇಫ್ತಾರ್ ಆಯೋಜನೆ ಮಾಡುವ ಮೂಲಕ ಐಕ್ಯತೆಯಿಂದ ಕೂಡಿ ಬಾಳೋಣ ಎಂಬ ತತ್ವವನ್ನು ಸಾರಿದ್ದಾರೆ. ಇದನ್ನೂ ಓದಿ: ಹೌದು, ನನ್ನ ಮಗನ ಕೊಲೆಯಾಗಿದೆ, ಅದನ್ನ ಧರ್ಮದೊಂದಿಗೆ ಲಿಂಕ್ ಮಾಡ್ಬೇಡಿ: ಅಂಕಿತ್ ತಂದೆ
ಇಫ್ತಾರ್ ನಡೆದ ಮರುದಿನ ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್‍ಪಾಲ್, ನನ್ನ ಮಗನ ಕೊಲೆ ಕೇವಲ ದ್ವೇಷದಿಂದ ನಡೆದಿತ್ತು. ನನ್ನ ಮಗನ ಸಾವಿನ ಮೊದಲು ನಾನು ಯುವತಿಯ ಪೋಷಕರನ್ನು ಭೇಟಿಯಾಗಿ ಸಮಾಧಾನದಿಂದ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಅಂತಾ ಮನವಿ ಮಾಡಿಕೊಂಡಿದ್ದೆ. ಆದ್ರೆ ಆ ವೇಳೆ ಯುವತಿಯ ಮನೆಯವರು ತುಂಬಾ ಕೋಪದಲ್ಲಿದ್ದರಿಂದ ನನ್ನ ಮಾತನ್ನು ಅವರು ಕೇಳಿಸಿಕೊಳ್ಳಲಿಲ್ಲ ಎಂದು ದುಃಖ ವ್ಯಕ್ತಪಡಿಸಿದರು.
ಯಶ್‍ಪಾಲ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಾಕಷ್ಟು ಮುಸ್ಲಿಂ ಜನರು ಭಾಗಿಯಾಗಿದ್ದರು. ಒಂದು ರೀತಿಯಲ್ಲಿ ಯಶ್‍ಪಾಲ್‍ರ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಎರಡೂ ಸಮುದಾಯದ ಜನರು ಪರಸ್ಪರ ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಕೋರಿದ್ರು.
ನನ್ನ ಪ್ರಕಾರ ಇಂದಿನ ಯುವ ಸಮುದಾಯ ಕೋಪದಲ್ಲಿ ಅಹಿತಕರ ಘಟನೆಗಳಲ್ಲಿ ಭಾಗಿಯಗ್ತಾರೆ. ಹಾಗಾಗಿ ಎಲ್ಲ ಯುವಕರು ಎದುರಾಗುವ ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು. ನಾವೆಲ್ಲರೂ ಒಂದೇ ಸಮಾಜದಲ್ಲಿ ಬದುಕುತ್ತಿದ್ದು, ಪರಸ್ಪರ ಹೊಂದಾಣಿಕೆ, ಐಕ್ಯತೆ, ಒಗ್ಗಟ್ಟಿನಿಂದ ಬಾಳಬೇಕು ಎಂಬುವುದು ನನ್ನ ಆಶಯವಾಗಿದೆ ಅಂತಾ ತಿಳಿಸಿದ್ರು.