ಮಂಡ್ಯ: ಆಸ್ತಿ ಆಸೆಗಾಗಿ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ನಿವಾಸಿ ಬೊಮ್ಮೇಗೌಡ ಎಂಬವರೇ ಮಗನಿಂದಲೇ ಹತರಾದ ದುರ್ದೈವಿ.
ಬೊಮ್ಮೇಗೌಡ ಮತ್ತು ಅವರ ಮಗ ಮಂಜುಗೆ ಆಸ್ತಿ ವಿಚಾರವಾಗಿ ಪದೇ ಪದೇ ಗಲಾಟೆಯಾಗುತ್ತಿತ್ತು. ಇಂದು ಎಂದಿನಂತೆ ಅಪ್ಪ ಮಕ್ಕಳಿಬ್ಬರು ಜಮೀನಿನ ಬಳಿ ಕೆಲಸಕ್ಕೆಂದು ಹೋಗಿದ್ದರು. ಈ ಸಂದರ್ಭದಲ್ಲಿ ಆಸ್ತಿ ಬರೆದು ಕೊಡುವಂತೆ ಮಂಜು ತನ್ನ ತಂದೆ ಬೊಮ್ಮೇಗೌಡನನ್ನು ಕೇಳಿದ್ದಾನೆ. ಈ ವಿಷ್ಯವಾಗಿ ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದಿದೆ. ಇದ್ರಿಂದ ಕೋಪಗೊಂಡ ಮಂಜು ಕೊಡಲಿಯಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ತ್ರಾವವಾಗಿ ಬೊಮ್ಮೇಗೌಡ ಸಾವನ್ನಪ್ಪಿದ್ದಾರೆ.
ತಂದೆಯನ್ನು ಕೊಲೆ ಮಾಡಿದ ಬಳಿಕ ಮಂಜು ನಾಪತ್ತೆಯಾಗಿದ್ದಾನೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಕಿಕ್ಕೇರಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.