ಬೆಂಗಳೂರು: ಮಗ-ಸೊಸೆಯ ಕಿರುಕುಳಕ್ಕೆ ವೃದ್ಧ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಆರೋಪಿಗಳ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಗಿರನಗರ ನಿವಾಸಿ ಕೃಷ್ಣಮೂರ್ತಿ(70) ಹಾಗೂ ಸ್ವರ್ಣಮೂರ್ತಿ(68) ಆತ್ಮಹತ್ಯೆ ಮಾಡಿಕೊಂಡಿದ್ದ ವೃದ್ಧ ದಂಪತಿ. ಆಗಸ್ಟ್ 23ರಂದು ಫ್ಯಾನಿಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಘಟನೆ ನಡೆದ ಬಹುದಿನಗಳ ಬಳಿಕ ಹೆತ್ತವರ ಸಾವಿಗೆ ಮಗ ಹಾಗೂ ಸೊಸೆಯೇ ಕಾರಣವೆಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮನೆಯ ಗೋಡೆಯ ಮೇಲೆ ಕೃಷ್ಣಮೂರ್ತಿ ಅವರು ಕೊನೆ ಸಂದೇಶ ಬರೆದಿದ್ದರು, ಇತ್ತ ಸ್ವರ್ಣಮೂರ್ತಿ ಅವರ ಹಣೆ ಮೇಲೆ ಸಂದೇಶವೊಂದು ಬರೆದಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ಸತ್ಯಾಂಶ ಹೊರಬಿದ್ದಿದೆ.
ಸಾಯುವ ಮುನ್ನ ಗೋಡೆಯ ಮೇಲೆ ಮಗ ಹಾಗೂ ಸೊಸೆಯ ಕಿರುಕುಳದ ಮಾಹಿತಿ ಬಿಚ್ಚಿಟ್ಟು ವೃದ್ಧ ತಂದೆ ಸಹಿ ಮಾಡಿದ್ದರು. “ನರಕದಿಂದ ಸ್ವರ್ಗದ ಕಡೆಗೆ ಪಯಣ, ನಮ್ಮಿಬ್ಬರ ಸಾವಿಗೆ ಸೊಸೆ ಸ್ನೇಹ ಸೂರ್ಯನಾರಾಯಣ, ಮಗ ಮಂಜುನಾಥ್ ಶ್ರೇಯಸ್ ಚಿತ್ರಹಿಂಸೆಯೇ ಕಾರಣ. ಅವರು ನಮ್ಮಿಬ್ಬರಿಗೂ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ” ಎಂದು ಗೋಡೆಯ ಮೇಲೆ ಬರೆದು ಕೊನೆಯಲ್ಲಿ ಸಹಿ ಮಾಡಿದ್ದರು. ಇತ್ತ ತಾಯಿ ಹಣೆ ಮೇಲೆ “ನನ್ನನ್ನು ಕ್ಷಮಿಸು” ಎಂದು ಬರೆದುಕೊಂಡು, ಕೊನೆಗೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದರು.
ಈ ದುರಂತ ಸಾವಿನ ಹಿಂದಿನ ರಹಸ್ಯದ ತನಿಖೆಗೆ ಮುಂದಾದ ಗಿರನಗರ ಪೊಲೀಸರು, ಪ್ರಕರಣವನ್ನು ಭೇದಿಸಿದ್ದಾರೆ. ಈಗಾಗಲೇ ಸೊಸೆ ಸ್ನೇಹ ಹಾಗೂ ಮಗ ಮಂಜುನಾಥ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದಾರೆ.