ನೆಲಮಂಗಲ: ತಂದೆಯೊಬ್ಬ, ನಿನಗೆ ಸಿಟಿ ತೋರಿಸುತ್ತೇನೆಂದು ಹೇಳಿ ಮಗನನ್ನು ಕರೆದುಕೊಂಡು ಬಂದು ಬಿಟ್ಟು ಹೋದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ಬಾಲಕನನ್ನು ಪ್ರಜ್ವಲ್ ಎಂದು ಗುರುತಿಸಲಾಗಿದ್ದು, ತಂದೆ ಪ್ರಹ್ಲಾದ್ ಸಿಟಿಯಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ಬಾಲಕ ಸ್ಥಳೀಯರಿಂದ ರಕ್ಷಿಸಲ್ಪಟ್ಟಿದ್ದು ತಂದೆಗಾಗಿ ಹುಡುಕಾಟ ನಡೆಸುತ್ತಿದ್ದಾನೆ.
ಈ ಬಗ್ಗೆ ಮಾತನಾಡಿದ ಬಾಲಕ, ಹೊಸದುರ್ಗದ ಬಿಡಕಟ್ಟೆ ನನ್ನ ಊರಾಗಿದ್ದು, ನನ್ನಪ್ಪ ಇಲ್ಲಿ ನನ್ನನ್ನು ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ. ಯಾಕೆ ಇಲ್ಲಿಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನ್ನ ಬಿಟ್ಟು ಹೋಗಿದ್ದಲ್ಲದೇ ಕೈ-ಕಾಲುಗಳಿಗೆ ಗಾಯ ಕೂಡ ಮಾಡಿದ್ದಾರೆ ಎಂದು ಹೇಳಿದ್ದಾನೆ.
ಅಮ್ಮ ಬಿಟ್ಟೋಗಿ ಮೂರು ವರ್ಷ ಆಗಿದ್ದು, ಅವರು ಊರಲ್ಲಿ ಇದ್ದಾರೆ. ಅವರ ಜೊತೆ ತಮ್ಮನೂ ಇದ್ದಾನೆ. ನಾನು ಕೂಡ ಊರಲ್ಲೇ ಇದ್ದೆ. ಆದರೆ ಅಪ್ಪ ನಿನಗೆ ಸ್ಥಳಗಳನ್ನು ತೋರಿಸುತ್ತೇನೆ ಎಂದು ಹೇಳಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾರೆ. ಅಲ್ಲದೆ ನನಗೆ ಗಾಯ ಮಾಡಿ ಇಲ್ಲೇ ಬಿಟ್ಟು ಹೋಗಿದ್ದಾರೆ.
ಅಪ್ಪ ಪ್ರತಿನಿತ್ಯ ಹಿಂಸೆ ಕೊಡುತ್ತಾನೆ ಇದ್ದಾರೆ. ಒಂದು ದಿನನೂ ಫ್ರೀ ಬಿಡಲ್ಲ, ಹೊಡೀತಾನೇ ಇರುತ್ತಾರೆ. ಶಾಲೆಗೆ ಹೋಗುತ್ತೇನೆ. ಶಾಲೆಯಿಂದ ಬಂದ ಬಳಿಕ ಮತ್ತೆ ಹೊಡೀತಾರೆ. ಅಪ್ಪ ಇನ್ನೊಂದು ಮದುವೆಯಾಗಿದ್ದಾರೆ. ಎರಡನೇ ಮದುವೆಯಾದ ಬಳಿಕ ಅಪ್ಪ ತುಂಬಾನೇ ತೊಂದರೆ ಕೊಡುತ್ತಿದ್ದಾರೆ. ಇಂದು ಇಬ್ಬರು ಅಂಕಲ್ ಗಳ ಕೈಗೆ ಸಿಕ್ಕಿದ್ದು, ಅವರು ನನ್ನನ್ನು ರಕ್ಷಿಸಿದ್ದಾರೆ ಎಂದು ಕಣ್ಣೀರು ಹಾಕಿದ್ದಾನೆ.
ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.