ಭುವನೇಶ್ವರ: ತಂದೆಯೊಬ್ಬ ತನ್ನ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಕಿಯೋಂಜ್ ಹರ್ ಜಿಲ್ಲೆಯಲ್ಲಿ ನಡೆದಿದೆ.
ದುರ್ಗಾ ಸಿಧು(35) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ತಂದೆ. ಉಲಿಬಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 9, 7 ಮತ್ತು 5 ವರ್ಷ ವಯಸ್ಸಿನ ಬಾಲಕಿಯರ ಶವಗಳು ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಸಿಧು ತಾಯಿ ನೋಡಿದ್ದಾರೆ. ತಕ್ಷಣ ಗಾಬರಿಗೊಂಡು ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಧು ತನ್ನ ಮೂವರು ಹೆಣ್ಣುಮಕ್ಕಳನ್ನು ಬಿದಿರಿನ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸಿಧು ಪತ್ನಿ ಸುಮಾರು ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಅಂದಿನಿಂದ ಸಿಧು ಮೇಲೆ ಮೂವರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇತ್ತು. ಇದರಿಂದ ಆತ ಒತ್ತಡದಲ್ಲಿದ್ದನು ಎಂದು ಸಿಧು ತಾಯಿ ಹೇಳಿರುವುದಾಗಿ ಇನ್ಸ್ ಪೆಕ್ಟರ್ ಗಗನ್ ಬಿಹಾರಿ ಬಿಸ್ವಾಲ್ ತಿಳಿಸಿದ್ದಾರೆ.
ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.