ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ (Jammu Kashmir) ಉಗ್ರರ ಗುಂಡಿನ ದಾಳಿಗೆ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ (Captain Pranjal) ದೊಡ್ಡ ಕುಟುಂಬದಿಂದ ಬಂದು ಸೈನ್ಯ ಸೇರಿದ್ದರು ಎಂದು ಪ್ರಾಂಜಲ್ ಅವರ ತರಬೇತುದಾರ ಹಾಗೂ ಮಾರ್ಗದರ್ಶಕರಾದ ನಾಯಕ್ ಭಾಸ್ಕರ್ ರೈ (Nayak Bhaskar Rai) ತಿಳಿಸಿದ್ದಾರೆ.
ಮೃತ ಪ್ರಾಂಜಲ್ ಅಂತಿಮ ದರ್ಶನದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಾಂಜಲ್ ಅವರಿಗೆ ಹುಟ್ಟುವಾಗಲೇ ಸೈನಿಕರ ರಕ್ತ ಇತ್ತೇನೋ. ಅಂತಹ ದೇಶಭಕ್ತಿ ಹಾಗೂ ಸೈನ್ಯಕ್ಕೆ ಸೇರುವ ಒಂದು ಅಚಲ ನಿರ್ಧಾರವನ್ನು ಅವರು ಇಟ್ಟುಕೊಂಡಿದ್ದರು. ಪ್ರಾಂಜಲ್ ತಮ್ಮ ಪಿಯುಸಿ ಶಿಕ್ಷಣ ಮುಗಿಸಿದ ಬಳಿಕ ನನಗೆ ಅವರ ಸಂಪರ್ಕವಾಯಿತು. ಅದರ ಬಳಿಕ ಅವರು ಎಸ್‌ಎಸ್‌ಬಿಗೆ ತಯಾರಿ ನಡೆಸಿ, ಅದರಲ್ಲಿ ಪಾಸಾಗುತ್ತಾರೆ. ಈ ಸಂದರ್ಭದಲ್ಲಿ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡು ಪರೀಕ್ಷಾ ತಯಾರಿಯನ್ನು ನಡೆಸುತ್ತಿದ್ದರು. ದೈಹಿಕ ಪರೀಕ್ಷೆ ಹಾಗೂ ಸುಧಾರಣೆಗೆ ನನ್ನ ಬಳಿ ಬರುತ್ತಿದ್ದರು. ಆ ಬಗ್ಗೆ ನಾನು ಅನೇಕ ಟಿಪ್ಸ್‌ಗಳನ್ನು ಕೊಡುತ್ತಿದ್ದೆ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ
ಪ್ರಾಂಜಲ್ ಒಬ್ಬ ಒಳ್ಳೆಯ ಕ್ರೀಡಾಪಟು ಆಗಿದ್ದರಿಂದ ಒಳ್ಳೆ ಮೈಕಟ್ಟು ಹೊಂದಿದ್ದರು. ಸೇನೆಗೆ ಸೇರುವಂತಹ ಎಲ್ಲಾ ಅರ್ಹತೆಗಳು ಅವರಲ್ಲಿತ್ತು. ಅವರಂತಹ ದೊಡ್ಡ ಕುಟುಂಬದಿಂದ ಬಂದವರು ಸೇನೆಗೆ ಸೇರುವುದು ಬಹಳ ಕಡಿಮೆ. ಯಾಕೆಂದರೆ ಅವರ ತಂದೆ ಒಂದು ಪ್ರತಿಷ್ಠಿತ ಕಂಪನಿಯ ಎಂಡಿಯಾಗಿದ್ದರು. ಅವರ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಬಹುದಾಗಿತ್ತು. ಅದೇ ರೀತಿ ಬೇರೆ ಬೇರೆ ಕೆಲಸಗಳಿಗೂ ಹೋಗಬಹುದಿತ್ತು. ಆದರೂ ಅವರು ತಮ್ಮ ಮಗನನ್ನು ಸೇನೆಗೆ ಕಳುಹಿಸಿದರು. ಪ್ರಾಂಜಲ್ ಅವರು ಕೂಡ ಅದನ್ನೇ ಒಪ್ಪಿಕೊಂಡು ದೇಶಕ್ಕೋಸ್ಕರ ಸೇವೆ ಮಾಡಿದ್ದು, ಇಂದು ವೀರಮರಣವನ್ನಪ್ಪಿದ್ದಾರೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಮುಂದೆ ಚುನಾವಣಾ ಸೋಲಿನ ನೋವು ತೋಡಿಕೊಂಡ ವಿ.ಸೋಮಣ್ಣ
ಪ್ರಾಂಜಲ್ ಕಮಿಷನ್ಡ್ ಆಗಿ ವಾಪಸ್ ಬಂದು ನನ್ನನ್ನು ಭೇಟಿಯಾದ ಸಂದರ್ಭದಲ್ಲಿ ನಾನು ಅವರಿಗೆ ಒಂದು ಮಾತು ಹೇಳಿದ್ದೆ. ನಿಮ್ಮ ತಂದೆ ಇಷ್ಟು ದೊಡ್ಡ ಕಂಪನಿಯಲ್ಲಿ ಎಂಡಿ ಆಗಿದ್ದಾರೆ. ನೀವೊಬ್ಬ ಜನರಲ್ ಆಗುತ್ತೀರಿ ಎಂದು ಹೇಳಿದ್ದೆ. ದೇವರ ಇಚ್ಛೆ ಇಂದು ಈ ಸ್ಥಿತಿಯಲ್ಲಿ ನಾವು ಅವರನ್ನು ಕಾಣಬೇಕಾಗಿದೆ. ಅವರ ಕಲಿಕೆಯ ವಿಷಯಕ್ಕೆ ಸಂಬಂಧಪಟ್ಟಂತೆ ಹೇಳುವಂತಹ ಜ್ಞಾನ ನನ್ನಲ್ಲಿ ಇರಲಿಲ್ಲ. ಈ ಬಗ್ಗೆ ಅವರೇ ಪೂರಕ ಮಾಹಿತಿಗಳನ್ನು ಪಡೆದುಕೊಂಡು ತಯಾರಿ ನಡೆಸಿದ್ದರು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: Kambala: ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳದ ರಂಗು – ಸಾರ್ವಜನಿಕರಿಗೆ ಪ್ರವೇಶ ಉಚಿತ