ಭೋಪಾಲ್: 16 ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಸಿರ್ಸೋಡಾ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಶನಿವಾರ ಸಂಜೆ ನಡೆದಿದ್ದು, ಪೋಷಕರೊಂದಿಗೆ ಬಾಲಕಿ ವಾಸಿಸುತ್ತಿರುವ ಮನೆಯಲ್ಲೇ ಅತ್ಯಾಚಾರ ನಡೆದಿದೆ. ಘಟನೆ ಕುರಿತು ಬಾಲಕಿ ತಾಯಿಯ ಫೋನ್‌ನಿಂದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅತ್ಯಾಚಾರ ನಡೆಯುತ್ತಿದ್ದ ಸಂದರ್ಭದಲ್ಲಿ ತಾಯಿ ಕೂಡ ಮನೆಯಲ್ಲಿದ್ದಳು ಎಂದು ಹೇಳಿಕೊಂಡಿದ್ದಾಳೆ.
ಆರೋಪಿಯನ್ನು ಅರವಿಂದ್ ಶರ್ಮಾ ಎಂದು ಗುರುತಿಸಲಾಗಿದ್ದು, ಘಟನೆ ಕುರಿತು ಮಗಳು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಆರೋಪಿ ತಂದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲದೆ ಮಗಳನ್ನು ಕೊಲ್ಲುವುದಾಗಿ ಸಹ ಬೆದರಿಕೆ ಹಾಕಿದ್ದಾನೆ.
ಶನಿವಾರ ಸಂಜೆ ದೂರವಾಣಿ ಮೂಲಕ ದೂರು ಸ್ವೀಕರಿಸಿದ್ದೇವೆ. ಆದರೆ ನಾವು ಸ್ಥಳ ತುಲುಪುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ. ಸಂತ್ರಸ್ತೆ ದೇಹದ ಮೇಲೆ ಹೆಚ್ಚು ಗಾಯದ ಗುರುತುಗಳಿದ್ದವು. ಆಕೆಯನ್ನು ಸ್ಥಳದಿಂದ ರಕ್ಷಿಸಲಾಗಿದೆ ಹಾಗೂ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಗೋಹಾದ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಮಲ್ ಕಾಂತ್ ದುಬೇ ಮಾಹಿತಿ ನೀಡಿದ್ದಾರೆ.
ತಂದೆ ಗಂಡು ಮಗು ಬಯಸಿದ್ದರಿಂದ ಬಾಲ್ಯದಿಂದಲೂ ವಿನಾಕಾರಣ ನನ್ನನ್ನು ಮನಬಂದAತೆ ಥಳಿಸುತ್ತಿದ್ದ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ.
ತಾಯಿ ನನ್ನನ್ನು ರಕ್ಷಿಸಲು ಮತ್ತು ನನಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಳು. ಅವಳನ್ನೂ ಮನಬಂದAತೆ ಥಳಿಸುತ್ತಿದ್ದ. ಗಂಡು ಮಗುವಿಗೆ ಜನ್ಮ ನೀಡದ ಕಾರಣ ಅವಳನ್ನೂ ದೂಷಿಸುತ್ತಿದ್ದ. ಶನಿವಾರ ಮೊದಲು ನನ್ನನ್ನು ಕೋಣೆಯೊಳಗೆ ಬೀಗ ಹಾಕಿ ಥಳಿಸಿದ ನಂತರ ಅತ್ಯಾಚಾರ ಎಸಗಿದ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.
ಈ ಕುರಿತು ಸಂತ್ರಸ್ತೆಯ ತಾಯಿ ಪ್ರತಿಕ್ರಿಯಿಸಿ, ಮಗಳ ಹೇಳಿಕೆಯನ್ನು ಧೃಡೀಕರಿಸಿದ್ದು, ಘಟನೆ ನಡೆದಾಗ ನಾನು ಬೇರೆ ಕೋಣೆಯಲ್ಲಿದ್ದೆ. ಮಗಳ ಮೇಲೆ ಅತ್ಯಾಚಾರ ನಡೆದಿದ್ದನ್ನು ತಿಳಿದ ನಂತರ ಪೊಲೀಸರಿಗೆ ಕರೆ ಮಾಡುವಂತೆ ಸೂಚಿಸಿದೆ ಎಂದು ವಿವರಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪೊಲೀಸರು ಹಲವಾರು ಸಂಭಾವ್ಯ ಅಡಗುದಾಣಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈವರೆಗೆ ಆತನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.