-ವೃದ್ಧಾಶ್ರಮ ನಿರ್ಮಿಸುವಂತೆ ಮನವಿ
ಭುವನೇಶ್ವರ: ಒಡಿಶಾದ ಜಜ್ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸಿಸುವ 75 ವರ್ಷದ ಮಾಜಿ ಪತ್ರಕರ್ತ ತಮ್ಮ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ದಾನ ಮಾಡಿದ್ದಾರೆ. ತಾವೂ ನೀಡಿರುವ ಜಮೀನಿನಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಬೇಕೆಂದು ಬಯಸಿದ್ದಾರೆ.
ಮಾಜಿ ಪತ್ರಕರ್ತ ಖೇತ್ರಮೋಹನ್ ಮಿಶ್ರಾ ಅವರು ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ. ಮಿಶ್ರಾ ಅವರನ್ನು ಮಗ ಮತ್ತು ಸೊಸೆ ಸರಿಯಾಗಿ ನೋಡಿಕೊಳ್ಳದಿದ್ದಕ್ಕೆ ಈ ರೀತಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರು ಮಿಶ್ರಾ ಅವರನ್ನು ಕೊಲೆ ಮಾಡಲೂ ಸಾಕಷ್ಟು ಬಾರಿ ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.
Advertisement
Advertisement
ನನ್ನ ಮಗ ಮತ್ತು ಸೊಸೆಯ ನಡವಳಿಕೆಯಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಇಚ್ಛೆಯಿಂದ ಸಹಿ ಹಾಕಿದ್ದೇನೆ. ನನ್ನ ಜೀವನದ ಉಳಿದ ಭಾಗವನ್ನು ವೃದ್ಧಾಶ್ರಮದಲ್ಲಿ ಕಳೆಯುತ್ತೇನೆ. ಹೀಗಾಗಿ ಸರ್ಕಾರವು ನನ್ನ ಜಮೀನಿನಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಅಲ್ಲಿ ನನ್ನಂತಹ ವೃದ್ಧರಿಗೆ ಆಶ್ರಯ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಖೇತ್ರಮೋಹನ್ ಮಿಶ್ರಾ ಹೇಳಿದ್ದಾರೆ.
Advertisement
ಮಿಶ್ರಾ ಅವರನ್ನು ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಜ್ಪುರ ಜಿಲ್ಲಾಧಿಕಾರಿ ರಂಜನ್ ಕೆ. ದಾಸ್ ತಿಳಿಸಿದ್ದಾರೆ.
Advertisement
ನಾವು ಮಿಶ್ರಾ ಅವರನ್ನು ಚಂಡಿಖೋಲೆ ಬಳಿಯ ವೃದ್ಧಾಶ್ರಮವೊಂದರಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದೇವೆ. ಅವರ ಮರಣದ ನಂತರವೂ ಕುಟುಂಬದವರು ಅವರ ಅಂತ್ಯಕ್ರಿಯೆಗೆ ಬರುವುದಕ್ಕೆ ಅನುಮತಿ ನೀಡಬಾರದೆಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ. ಮಿಶ್ರಾ ಅವರು ತಮ್ಮ ಭೂಮಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ. ಜೊತೆಗೆ ಅಲ್ಲಿ ವೃದ್ಧಾಶ್ರಮ ಕಟ್ಟಬೇಕೆಂದು ಬಯಸಿದ್ದಾರೆ. ಹೀಗಾಗಿ ನಾವು ಕೂಡ ಅಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.