ಭೋಪಾಲ್: ತೋಟದಲ್ಲಿ ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಇಬ್ಬರು ಮಕ್ಕಳು ಬಾವಿಗೆ ಬಿದ್ದಾಗ ಅವರನ್ನು ರಕ್ಷಿಸಲು ತಂದೆ ಕೂಡ ಬಾವಿಗೆ ಹಾರಿದ್ದಾರೆ. ಆದರೆ ದುರಾದೃಷ್ಟವಶಾತ್ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಬಾಲಘಾಟ್ ಜಿಲ್ಲೆಯ ನಾಗ್ಪುರ ನಿವಾಸಿ ಇಂಧ್ರ ಕುಮಾರ್ ಭನೋಟೆ(34), ಮಗಳು ಲುಭಾನಿ ಹಾಗೂ ರಿತಿಕ್(3) ಮೃತ ದುರ್ದೈವಿಗಳು. ಬುಧವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಗುರುವಾರ ಬೆಳಕಿಗೆ ಬಂದಿದೆ. ಬುಧವಾರ ರಾತ್ರಿ ಭನೋಟೆ ಅವರು ಜಾನುವಾರುಗಳಿಗೆ ಮೇವನ್ನು ತರಲು ತೋಟಕ್ಕೆ ಹೋಗುತ್ತಿದ್ದರು, ಈ ವೇಳೆ ಅವರ ಹಿಂದೆ ಇಬ್ಬರು ಮಕ್ಕಳು ಕೂಡ ಹೋಗಿದ್ದರು.
ತೋಟದಲ್ಲಿ ತಂದೆ ಮೇವನ್ನು ಸಂಗ್ರಹಿಸುತ್ತಿದ್ದ ವೇಳೆ ತೋಟದಲ್ಲಿದ್ದ ಬಾವಿ ಬಳಿ ಇಬ್ಬರು ಮಕ್ಕಳು ಹೋಗಿದ್ದರು. ಆಗ ರಿತಿಕ್ ಆಯತಪ್ಪಿ ಬಾವಿಗೆ ಬಿದ್ದಿದ್ದು, ಅವನನ್ನು ರಕ್ಷಿಸಲು ಹೋಗಿ ಲುಭಾನಿ ಕೂಡ ನೀರಿಗೆ ಬಿದ್ದಿದ್ದಾಳೆ. ಇವರಿಬ್ಬರನ್ನು ರಕ್ಷಿಸಲು ತಂದೆ ಕೂಡ ಬಾವಿಗೆ ಹಾರಿದ್ದಾರೆ. ಆದರೆ ದುರಾದೃಷ್ಟವಶಾತ್ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮಾರನೇ ದಿನ ಭನೋಟೆ ಅವರ ಪತ್ನಿ ತೋಟಕ್ಕೆ ಹೋಗಿದ್ದ ತನ್ನ ಪತಿ ಮಕ್ಕಳು ಇನ್ನೂ ವಾಪಸ್ ಬಂದಿಲ್ಲ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ವೇಳೆ ತೋಟದ ಬಳಿ ಗ್ರಾಮಸ್ಥರು ತೆರಳಿದಾಗ ಬಾವಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹಗಳನ್ನು ಗ್ರಾಮಸ್ಥರು ಬಾವಿಯಿಂದ ಹೊರತೆಗೆದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.