Connect with us

Crime

ತಂದೆ, ವಿಕಲಚೇತನ ಬಾಲಕನನ್ನು ಸುತ್ತಿಗೆಯಿಂದ ಹೊಡೆದು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದ ದಂಪತಿ

Published

on

ಲಕ್ನೋ: ಸಂಬಂಧಿಕರನ್ನೇ ದಂಪತಿ ಸುತ್ತಿಗೆಯಿಂದ ಹೊಡೆದು, ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದು, ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಪ್ರೇಮ್ ಕುಮಾರ್ ಮತ್ತು ಮಾಧುರಿ ಎಂದು ಗುರುತಿಸಲಾಗಿದೆ. ಈ ದಂಪತಿ ನವೆಂಬರ್ 8ರ ರಾತ್ರಿ ತಮ್ಮ ಸಂಬಂಧಿಕ ಹಾಗೂ ಆತನ ವಿಕಲಚೇತನ ಮಗನನ್ನು ಸುತ್ತಿಗೆಯಿಂದ ಹೊಡೆದು, ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಲೆ ಮಾಡಿದ್ದರು. ಆದರೆ ಆರೋಪಿಗಳು ಯಾರೆಂದು ಪತ್ತೆಯಾಗಿರಲ್ಲಿಲ್ಲ. ಆದರೆ ನವೆಂಬರ್ 10ರಂದು ಕೊಲೆಯಾದ ವ್ಯಕ್ತಿಯ ಸಹೋದರ ರಾಮ್‍ಚರಣ್ ತಿವಾರಿ ಅವರು ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ನನ್ನ ಸಹೋದರ ಹಾಗೂ ಆತನ ಕಿರಿಯ ಮಗನ ಕೊಲೆಯಾಗಿದೆ ಎಂದು ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಘಟನಾ ಸ್ಥಳಕ್ಕೆ ಭೇಟಿಕೊಟ್ಟ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಆರಂಭಿಸಿದರು. ಈ ಸಂಬಂಧ ಘಟನಾ ಸ್ಥಳದ ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದಾಗ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿತು. ಬಳಿಕ ತನಿಖೆ ಚುರುಕುಗೊಳಿಸಿದಾಗ ಗುರುವಾರ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾವೇ ಕೊಲೆ ಮಾಡಿರುವುದಾಗಿ ಪೊಲೀಸರು ತಪ್ಪೊಪ್ಪಿಕೊಂಡಿದ್ದಾರೆ. ಮೃತ ವ್ಯಕ್ತಿ ನಮ್ಮ ಸಂಬಂಧಿಕ. ಆತನಿಗೆ ಇಬ್ಬರು ಗಂಡು ಮಕ್ಕಳು. ಆದರೆ ಆತನ ನಡತೆ ಸರಿಯಿರಲಿಲ್ಲ, ಹಲವು ಅಕ್ರಮ ಸಂಬಂಧವನ್ನು ಆತ ಹೊಂದಿದ್ದ. ಆದ್ದರಿಂದ ಹಿರಿಯ ಮಗನಿಗೆ ಮದುವೆ ಆಗಿರಲಿಲ್ಲ. ಜೊತೆಗೆ ಸಂತ್ರಸ್ತನ ನಡತೆ ಸರಿಯಿಲ್ಲದ ಕಾರಣಕ್ಕೆ ಊರಿನಲ್ಲಿ ನಮ್ಮ ಕುಟುಂಬದ ಹೆಸರು ಹಾಳಾಗಿತ್ತು. ಇದರಿಂದ ಬೇಸತ್ತು ಸಂಬಂಧಿಕನನ್ನು ನಾವು ಕೊಲೆ ಮಾಡಲು ನಿರ್ಧರಿಸಿದೆವು.

ನವೆಂಬರ್ 8ರ ರಾತ್ರಿ 3 ಗಂಟೆ ವೇಳೆಗೆ ಸಂತ್ರಸ್ತನ ಮನೆಗೆ ನುಗ್ಗಿ ಆತನನ್ನು ಸುತ್ತಿಗೆ ಹಾಗೂ ಸ್ಕ್ರೂಡ್ರೈವರ್ ನಿಂದ ಕೊಲೆ ಮಾಡಿದೆವು. ಈ ವೇಳೆ ಆತನ ಕಿರಿಯ ಮಗ ನಿದ್ರೆಯಿಂದ ಎದ್ದು ಗಲಾಟೆ ಮಾಡಲು ಆರಂಭಿಸಿದ. ಆತನನ್ನು ಸುಮ್ಮನಾಗಿಸಲು ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾದೆವು. ಆದರೆ ಗಂಭಿರ ಗಾಯಗೊಂಡಿದ್ದ ಬಾಲಕ ಕೂಡ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ. ನಮಗೆ ಬಾಲಕನನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ, ಆತನ ತಂದೆಯನ್ನು ಮಾತ್ರ ನಾವು ಕೊಲೆ ಮಾಡಲು ಹೋಗಿದ್ದೆವು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಿದ್ದಾರೆ.

Click to comment

Leave a Reply

Your email address will not be published. Required fields are marked *