ಮಂಡ್ಯ: ನೀರಿನಲ್ಲಿ ಮುಳುಗುತ್ತಿದ್ದ ಒಂದು ವರ್ಷದ ಮಗನನ್ನು ರಕ್ಷಿಸಿ ತಂದೆ ಪ್ರಾಣಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರೇಶ್ವರ ಗ್ರಾಮದ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಫಿರೋಜ್ ಮಗನನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾರೆ.
ಫಿರೋಜ್ ಪತ್ನಿ ಜಬಿನ್ ತಾಜ್ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆಯುವ ಸಮಯದಲ್ಲಿ ಜಬಿನ್ ತಾಜ್ ಜೊತೆಯಲ್ಲಿ ಪತಿ ಫಿರೋಜ್ ಮತ್ತು ಒಂದು ವರ್ಷದ ಮಗ ಇದ್ದರು. ಈ ವೇಳೆ ಆಕಸ್ಮಿಕವಾಗಿ ಮಗ ನೀರಿಗೆ ಬಿದ್ದಿದ್ದಾನೆ. ಆಗ ಮಗನನ್ನು ರಕ್ಷಿಸಲು ಫಿರೋಜ್ ನೀರಿಗಿಳಿದಿದ್ದಾರೆ. ನಂತರ ಮಗನನ್ನು ರಕ್ಷಿಸಿದ್ದಾರೆ. ಆದರೆ ಸರಿಯಾಗಿ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನಂತರ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದು ಕಾರ್ಯಚರಣೆ ಮಾಡಿ ಮೃತದೇಹವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ. ಇನ್ನು ನೀರಿನಲ್ಲಿ ಮುಳುಗಿದ್ದ ಮಗ ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.