ಭೋಪಾಲ್: ಪ್ರೀತಿಸಿ ಓಡಿ ಹೋದ ಮಗಳಿಂದ ಬೇಸರಗೊಂಡು ತಂದೆ ಪುತ್ರಿಯ ತಿಥಿಯನ್ನು ಮಾಡಿರುವ ಘಟನೆ ಮಧ್ಯಪ್ರದೇಶದ ಕುಚ್ರೋಡ್ ಗ್ರಾಮದಲ್ಲಿ ನಡೆದಿದೆ.
19 ವರ್ಷದ ಮಗಳು ಪ್ರೀತಿಸಿದ ಯುವಕನ ಜೊತೆ ಹೋಗಿದ್ದಳು. ಇದರಿಂದ ಆಕ್ರೋಶಗೊಂಡ ತಂದೆ ಗೋಪಾಲ್ ಮಂಡೋರಾ ಅವರು ಜೀವಂತ ಮಗಳ ಸಾವನ್ನು ಘೋಷಿಸಿ, ಸಮುದಾಯ ಭವನದಲ್ಲಿ ಶಾಸ್ತ್ರೋಕ್ತವಾಗಿ ತಿಥಿ ಮಾಡಿದ್ದಾರೆ.
ಜು.25 ರಂದು ಮಗಳು ಪ್ರಿಯಕರನ ಜೊತೆ ಹೋಗಿದ್ದಳು, ಇಂದು ಆಕೆಯ ತಂದೆ ಸುಮಾದಾಯ ಭವನದಲ್ಲಿ ತಿಥಿ ಮಾಡಿದ್ದು, ಶಾಸ್ತ್ರೋಕ್ತವಾಗಿ ಎಲ್ಲ ಕಾರ್ಯಗಳನ್ನು ಮಾಡಿ, ಜೀವಂತ ಮಗಳಿಗೆ ಸಂತಾಪ ಸೂಚಿಸಿದ್ದಾರೆ. ತಿಥಿಗೆ ಆಗಮಿಸುವಂತೆ ಸಂಬಂಧಿಕರಿಗೆ ನೀಡಿದ್ದ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ, ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಯಾವ ರೀತಿ ತಿಥಿ ಮಾಡಿ ಸಂತಾಪ ಸೂಚಿಸುತ್ತಾರೆಯೋ ಅದೇ ರೀತಿ ಎಲ್ಲ ಕಾರ್ಯಗಳನ್ನು ಮಾಡಿದ್ದು, ಗ್ರಾಮಸ್ಥರನ್ನೆಲ್ಲ ಕರೆದಿದ್ದಾರೆ. ಮಾತ್ರವಲ್ಲದೆ ದೂರದೂರಿನ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಾರ್ಡ್ ಹಂಚಿ ತಿಳಿಸಿದ್ದಾರೆ. ಎಲ್ಲರನ್ನೂ ಆಹ್ವಾನಿಸಿ ಸಮುದಾಯ ಭವನದಲ್ಲಿ ತನ್ನ ಜೀವಂತ ಮಗಳ ತಿಥಿ ಮಾಡಿ ಶೋಕವನ್ನು ವ್ಯಕ್ತಪಡಿಸಿದ್ದಾರೆ.