ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ಈ ಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಚಖಂಡಿಯಲ್ಲಿ ಪ್ರವಾಹದ ಮಧ್ಯೆ ತಂದೆ-ಮಗ ಸಿಲುಕಿಕೊಂಡು ಅಪಾಯದಲ್ಲಿದ್ದಾರೆ.
ಹಿರಣ್ಯಕೇಶಿ, ಮಾರ್ಕಂಡೇಯ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮೇಲೆ ಸುಮಾರು ಎಂಟು ಅಡಿಯಷ್ಟು ನೀರು ಹರಿಯುತ್ತಿದೆ. ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
Advertisement
Advertisement
ಈ ಮಧ್ಯೆ ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನಿವಾಸಿಗಳಾದ ಶ್ರೀಶೈಲ ಉಪ್ಪಾರ(68) ಹಾಗೂ ರಮೇಶ್ ಉಪ್ಪಾರ(30) ಪ್ರವಾಹದ ಮಧ್ಯೆ ಸಿಲುಕಿಕೊಂಡು ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಸುಮಾರು ನಾಲ್ಕು ಗಂಟೆಯಿಂದ ತಂದೆ- ಮಗ ನೀರಿನ ಮಧ್ಯೆಯೇ ಸಿಲುಕಿದ್ದಾರೆ. ಚಿಚಖಂಡಿ ನಡುಗಡ್ಡೆಯಲ್ಲಿದ್ದ ಹೊಲದಲ್ಲಿನ ಎಮ್ಮೆಗಳನ್ನು ತರಲು ಹೋಗಿ ನೀರಿನ ಪ್ರವಾಹದ ಮಧ್ಯೆ ತಂದೆ ಮಗ ಸಿಲುಕಿದ್ದಾರೆ. ಅವರ ಜೊತೆ 4 ಎಮ್ಮೆಗಳು ಕೂಡ ಜೀವ ರಕ್ಷಣೆಗಾಗಿ ಪರದಾಡುತ್ತಿವೆ.
Advertisement
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪಬ್ಲಿಕ್ ಟಿವಿ ವರದಿಗಾರರು ತಂದೆ-ಮಗನನ್ನು ರಕ್ಷಣೆ ಮಾಡಿ ಎಂದು ಮುದೋಳ ಶಾಸಕ ಗೊವಿಂದ್ ಕಾರಜೋಳ್, ಎಸ್ ಪಿ ಲೋಕೆಶ್, ಡಿಸಿ ಆರ್. ರಾಮಚಂದ್ರನ್ ಹಾಗೂ ಮುದೋಳ ಸಿಪಿಐ ಶ್ರೀಶೈಲ್ ಬನ್ನೆ ಅವರಿಗೆ ತಿಳಿಸಿದ್ದಾರೆ. ಆದರೂ ಕೂಡ ಈವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿಲ್ಲ. ಬರೀ ಭರವಸೆಯನ್ನು ಮಾತ್ರ ನೀಡುತ್ತಿದ್ದಾರೆ. ಹೀಗಾಗಿ ರಕ್ಷಣೆಗೆ ಬಾರದ ಅಧಿಕಾರಿಗಳ ಮೇಲೆ ಜೀರಗಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.