– ಕೊನೆಗೆ ಅವನೇ ಒಪ್ಪಿಕೊಳ್ಳುವಂತೆ ವ್ಯೂಹ ರಚಿಸಿದ ಯುವತಿ
ಲಕ್ನೋ: ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ನಂತರ ಮೋಸ ಮಾಡುತ್ತಿದ್ದ ಯುವಕನಿಗೆ ತಂದೆ ಮಗಳು ತಕ್ಕ ಪಾಠ ಕಲಿಸಿದ್ದು, ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ.
ಈ ಕುರಿತು ರೋಚಕ ವ್ಯೂಹವನ್ನು ತಂದೆ ಮಗಳು ಹೆಣೆದಿದ್ದು, ಅದು ಯಶಸ್ವಿ ಸಹ ಆಗಿದೆ. ಮಗಳನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಒಂದು ಕಡೆ ತಂದೆ ದೂರು ನೀಡಿದ್ದರೆ, ಇನ್ನೊಂದೆಡೆ ಯುವತಿ ಆರೋಪಿಯನ್ನು ಮದುವೆಯಾಗಿ ಅವನ ಮನೆಯಲ್ಲೇ ಸಂಸಾರ ನಡೆಸುತ್ತಿದ್ದುದನ್ನು ಕಂಡು ಪೊಲೀಸರು ಬೆರಗಾಗಿದ್ದಾರೆ.
Advertisement
Advertisement
ತಂದೆ ಮಗಳು ಮಾಡಿದ್ದೇನು ?
ಗರ್ಭಿಣಿಯೊಬ್ಬಳು ವಿಷ ಸೇವಿಸಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂದು ಪೊಲೀಸರಿಗೆ ಕರೆ ಬಂದಿದೆ. ದೂರಿನ ಮೇರೆಗೆ ಯುವತಿಯ ಹೇಳಿಕೆ ಪಡೆಯಲು ಪೊಲೀಸರು ಆಸ್ಪತ್ರೆಗೆ ತೆರಳಿದಾಗ ಆಕೆ ಇರಲಿಲ್ಲ. ಮಗಳನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಯುವಕನ ವಿರುದ್ಧ ಆಕೆಯ ತಂದೆ ಸಹ ದೂರು ನೀಡಿದ್ದರು.
Advertisement
ತಲೆ ಕೆಡಿಸಿಕೊಂಡು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ನಂತರ ಯುವತಿಯನ್ನು ಹುಡುಕುತ್ತ ಪೊಲೀಸರು ಆರೋಪಿಯ ಮನೆಗೆ ಹೋಗಿದ್ದಾರೆ. ಆರೋಪಿಯ ಮನೆಯಲ್ಲೇ ಯುವತಿ ಇರುವುದನ್ನು ಕಂಡು ಪೊಲೀಸರು ಬೆರಗಾಗಿದ್ದಾರೆ. ಈ ಕುರಿತು ಯುವತಿಯನ್ನು ಪೊಲೀಸರು ಪ್ರಶ್ನಿಸಿದ್ದು, ನಾನು ಈ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಲ್ಲ ಎಂದು ತಿಳಿಸಿದ್ದಾಳೆ. ಆದರೆ ಯುವತಿ ತಂದೆ ಆತನ ವಿರುದ್ಧ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಭೋಜ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಪ್ರಕರಣದಿಂದ ಪೊಲೀಸರೇ ಕನ್ಫ್ಯೂಸ್ ಆಗಿದ್ದಾರೆ.
Advertisement
ಯುವಕನು ಆಕೆಯೊಂದಿಗೆ ಸಂಬಂಧ ಹೊಂದಿದ್ದಾನೆ. ಅವಳು ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ತಂದೆ ನೀಡಿರುವ ದೂರಿನ ಕುರಿತು ಪೊಲೀಸರು ಯುವತಿಯನ್ನು ಪ್ರಶ್ನಿಸಿದ್ದಾರೆ. ತಂದೆ ನನ್ನ ಅನುಮತಿ ಪಡೆಯದೇ ಪ್ರಕರಣ ದಾಖಲಿಸಿದ್ದಾರೆ ಎಂದು ಯುವತಿ ತಿಳಿಸಿದ್ದಾಳೆ.
ಪೊಲೀಸರು ತನಿಖೆ ಮುಂದುವರಿಸಿದ್ದು, ಈ ವೇಳೆ ತಂದೆ ನಿಜಾಂಶ ಬೆಳಕಿಗೆ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು, ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದ್ದ. ಹೀಗಾಗಿ ಯುವಕನನ್ನು ಹೆದರಿಸಲು ಮಗಳು ಈ ರೀತಿ ಮಾಡಿದ್ದಾರೆ. ಯುವಕನ ಮೇಲೆ ಒತ್ತಡ ಹೇರಲು ಈ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ತನಿಖೆ ನಡೆಸಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ನಿಜಾಂಶವನ್ನು ತಿಳಿದ ಪೊಲೀಸರು ಪ್ರಕರಣವನ್ನು ಹಿಂಪಡೆಯುವಂತೆ ತಿಳಿಸಿದ್ದಾರೆ. ಯುವತಿಯೂ ಸಹ ವಯಸ್ಕಳಾಗಿದ್ದು, ತಾನು ಮದುವೆಯಾದ ಹುಡುಗನನ್ನು ಪ್ರೀತಿಸುತ್ತಿದ್ದು, ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿರುವುದರಿಂದ ಅದನ್ನು ಹಿಂಪಡೆಯಬೇಕಿದೆ. ವ್ಯಕ್ತಿಯ ವಿರುದ್ಧ ಯುವತಿ ಯಾವುದೇ ಕ್ರಮ ಜರುಗಿಸಬಾರದು ಎಂದು ತಿಳಿಸಿದರೂ ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಭೋಜ್‍ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಪ್ರಸೀದ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ?
ಏಳು ತಿಂಗಳ ಹಿಂದೆ ಯುವತಿ ತನ್ನ ಪಕ್ಕದ ಮನೆಯವನನ್ನು ಪ್ರೀತಿಸುತ್ತಿದ್ದಳು. ಅವರ ಮಧ್ಯೆ ಸಂಬಂಧ ಬೆಳೆದು ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗುತ್ತಿದ್ದಂತೆ ಯುವಕ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದನು. ಆಕೆ ಗರ್ಭಿಣಿಯಾಗಿರುವ ಕುರಿತು ಆಕೆಯ ತಂದೆಗೂ ತಿಳಿದಿತ್ತು. ಆತ ಮದುವೆ ನಿರಾಕರಿಸಿದ್ದರಿಂದ ಹೆದರಿಸಿ ಮದುವೆಗೆ ಒಪ್ಪಿಸಲು ಯುವತಿ ಹಾಗೂ ಅವಳ ತಂದೆ ಈ ರೀತಿ ನಾಟಕವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ವಿಷ ಸೇವಿಸಿದ ವರದಿಯೂ ಸಹ ಸುಳ್ಳು ಎಂದು ಪೊಲೀಸರು ತಿಳಿಸಿದ್ದಾರೆ.