ನವದೆಹಲಿ: ತಂದೆ, ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತಿದೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ತಂದೆ-ತಾಯಿ ಜಗಳ, ಗುದ್ದಾಟಕ್ಕೆ 5 ತಿಂಗಳ ಪುಟ್ಟ ಕಂದಮ್ಮ ಬಲಿಯಾಗಿದೆ.
ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನಿವಾಸಿ ದೀಪ್ತಿ(29) ಹಾಗೂ ಸತ್ಯಜೀತ್(32) ಅವರ 5 ತಿಂಗಳ ಮಗು ಸಾವನ್ನಪ್ಪಿದೆ. ಭಾನುವಾರ ದೀಪ್ತಿ ಹಾಗೂ ಸತ್ಯಜೀತ್ ನಡುವೆ ಜಗಳ ನಡೆದಿತ್ತು. ಈ ವೇಳೆ ಅವರಿಬ್ಬರ ನಡುವೆ ಹೊಡೆದಾಟ ಕೂಡ ನಡೆದಿತ್ತು. ಈ ವೇಳೆ ಪತಿ ತನ್ನ ಪತ್ನಿಗೆ ಕೋಲಿನಿಂದ ಹೊಡೆಯುತ್ತಿದ್ದಾಗ ಕೋಲಿನಲ್ಲಿದ್ದ ಕಬ್ಬಿಣದ ಮೊಳೆ ತುಂಡಾಗಿ, ಆಕಸ್ಮಿಕವಾಗಿ ಹಾಸಿಗೆ ಮೇಲೆ ಮಲಗಿದ್ದ ಮಗುವಿನ ತಲೆ ಬಡಿದಿತ್ತು. ಆಗ ದಂಪತಿ ಮಗುವಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಸುಮ್ಮನಾಗಿದ್ದರು. ಈ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಿರಲಿಲ್ಲ.
ಬುಧವಾರ ಇದ್ದಕ್ಕಿದ್ದ ಹಾಗೆ ಮಗು ವಾಂತಿ ಮಾಡಲು ಆರಂಭಿಸಿ, ಅಸ್ವಸ್ಥಗೊಂಡಿತು. ಈ ವೇಳೆ ದೀಪ್ತಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಕರೆತರುವ ಮೊದಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಮಗುವಿನ ಮೃತದೇಹ ಕಳುಹಿಸಿದಾಗ ಮಗು ಹೇಗೆ ಸಾವನ್ನಪ್ಪಿತು ಎಂಬುದು ಬೆಳಕಿಗೆ ಬಂತು.
ಮಗುವಿನ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆತಬಿದ್ದಿದೆ, ಆದ್ದರಿಂದ ಅದರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮಗು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದಿದ್ದು, ಈ ಸಂಬಂಧ ಗಾಜಿಪುರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಬಗ್ಗೆ ತಿಳಿಯುತ್ತಿದ್ದಂತೆ ಆರೋಪಿ ಸತ್ಯಜೀತ್ ತಲೆಮರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.