ನವದೆಹಲಿ: ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್) ಎಚ್ಚರಿಕೆ ನೀಡಿದೆ.
ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಪ್ರಸ್ತುತವಾಗಿ ಎಫ್‍ಎಟಿಎಫ್ ಅಲ್ಲಿ ಪಾಕಿಸ್ತಾನ ಬೂದು ಬಣ್ಣದ ಪಟ್ಟಿಯಲ್ಲಿದೆ. ಆದರೆ ಉಗ್ರರಿಗೆ ಹಣ ನೀಡಿ ಸಹಾಯ ಮಾಡುತ್ತಿರುವ ಜಾಲದ ವಿರುದ್ಧ ಅಕ್ಟೋಬರ್ ಒಳಗೆ ಕ್ರಮ ಕೈಗೊಳ್ಳಲು ಪಾಕಿಸ್ಥಾನ ವಿಫಲವಾದರೆ ಎಫ್‍ಎಟಿಎಫ್‍ನ ಕಪ್ಪು ಪಟ್ಟೆಗೆ ಪಾಕ್ ಸೇರಲಿದೆ.
Advertisement
Advertisement
ಈ ಹಿಂದೆ ಉಗ್ರರ ದಮನದ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ಕೈಗೊಳ್ಳಲು ಜನವರಿಯವರೆಗೂ ಪಾಕ್‍ಗೆ ಗಡುವು ನೀಡಲಾಗಿತ್ತು. ಆದರೆ ಅದನ್ನು ಪೂರೈಸುವಲ್ಲಿ ಪಾಕ್ ವಿಫಲವಾಗಿತ್ತು. ಅಷ್ಟೇ ಅಲ್ಲ, ಮೇ 2019ರೊಳಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗಡುವು ನೀಡಿತ್ತು. ಆದರೆ ಈ ಅವಕಾಶವನ್ನು ಕೂಡ ಉಪಯೋಗಿಸಿಕೊಳ್ಳುವಲ್ಲಿ ಪಾಕ್ ವಿಫಲವಾಗಿದೆ.
Advertisement
ಅಕ್ಟೋಬರ್ 2019ರ ಒಳಗಾಗಿ ಉಗ್ರರ ವಿರುದ್ಧ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ತೆಗೆದುಕೊಳ್ಳುವಂತೆ ಎಫ್‍ಎಟಿಎಫ್ ಪಾಕಿಸ್ತಾನವನ್ನು ಆಗ್ರಹಿಸಿದೆ. ಇದೇ ಕೊನೆಯ ಅವಕಾಶವಾಗಿದ್ದು, ಮತ್ತೆ ಪಾಕ್ ವಿಫಲವಾದಲ್ಲಿ ಕಪ್ಪು ಪಟ್ಟಿಗೆ ಸೇರಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದೆ.
Advertisement
ಫ್ಲೋರಿಡಾದಲ್ಲಿ ನಡೆದ ಸಭೆಯಲ್ಲಿ ಪಾಕ್ ಮೇಲೆ ಮತ್ತಷ್ಟು ಒತ್ತಡ ಹೇರುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಅಕ್ಟೋಬರ್ ನಲ್ಲಿ ನಡೆಯುವ ಮಹಾ ಸಭೆಯಲ್ಲಿ ಈ ಸಂಬಂಧ ವೋಟಿಂಗ್ ನಡೆಯಲಿದ್ದು ಅದರ ಆಧಾರದ ಮೇಲೆ ನಿರ್ಣಯ ತೆಗೆದುಕೊಳ್ಳಲಾಗುವುದು. ಈ ವೋಟಿಂಗ್ ಮೇಲೆ ಪಾಕಿಸ್ತಾನದ ಭವಿಷ್ಯ ನಿಂತಿದೆ.
ಈ ಹಿಂದೆ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜಾರ್‍ನನ್ನು ವಿಶ್ವಸಂಸ್ಥೆ ಜಾಗತೀಕ ಉಗ್ರರ ಪಟ್ಟಿಗೆ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಎಫ್‍ಎಟಿಎಫ್‍ಗೆ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿತ್ತು. ಅಲ್ಲದೆ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವುದನ್ನು ತಡೆಯಲು ಕನಿಷ್ಠ ಮೂರು ರಾಷ್ಟ್ರಗಳ ಬೆಂಬಲ ಪಾಕ್‍ಗೆ ಇರಬೇಕು. ಈಗಾಗಲೇ ಚೀನಾ, ಮಲೇಷ್ಯಾ ಹಾಗೂ ಟರ್ಕಿ ದೇಶಗಳು ಪಾಕ್ ಪರ ನಿಂತಿದೆ ಎನ್ನಲಾಗುತ್ತಿದೆ.
ಕಳೆದ ವರ್ಷದ ಪಾಕಿಸ್ಥಾನವನ್ನು ಬೂದು ಬಣ್ಣದ ಪಟ್ಟಿಗೆ ಸೇರಿಸಿದ ಮೇಲೆ ಎಫ್‍ಎಟಿಎಫ್ ಪಾಕ್‍ಗೆ 27 ಅಂಶಗಳುಳ್ಳ ಕ್ರಿಯಾ ಯೋಜನೆ ಪಟ್ಟಿಯನ್ನು ನೀಡಿತ್ತು. ಹಾಗೆಯೇ ಇದನ್ನು ಪೂರ್ಣಗೊಳಿಸಿದರೆ ಪಾಕಿಸ್ಥಾನವನ್ನು ಬೂದು ಬಣ್ಣದ ಪಟ್ಟಿಯಿಂದ ತೆಗೆಯಲಾಗುತ್ತದೆ ಎಂದು ಸೂಚಿಸಿತ್ತು. ಕಳೆದ ತಿಂಗಳು ಚೀನಾದಲ್ಲಿ ನಡೆದ ಸಭೆಯಲ್ಲಿ 27 ಅಂಶಗಳಲ್ಲಿ 18 ಅಂಶಗಳನ್ನು ಇನ್ನೂ ಪಾಕಿಸ್ಥಾನ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೆ ಅಕ್ಟೋಬರ್‍ನಲ್ಲಿ ಎಫ್‍ಎಟಿಎಫ್ ಸಭೆಯಲ್ಲಿ ನಡೆಯುವ ವೋಟಿಂಗ್‍ನಲ್ಲಿ 36 ಮತದಲ್ಲಿ ಕನಿಷ್ಠ 15 ಮತ ಇಸ್ಲಾಮಾಬಾದ್ ಪಡೆದರೆ ಬೂದು ಪಟ್ಟಿಯಿಂದ ಅದನ್ನು ಮುಕ್ತಗೊಳಿಸಲಾಗುತ್ತದೆ ಎಂದು ಎಫ್‍ಎಟಿಎಫ್ ತಿಳಿಸಿದೆ.
ಏರ್ ಸ್ಟ್ರೈಕ್ ಮೂಲಕ ಶಾಕ್ ಕೊಟ್ಟು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ನಿಟ್ಟಿನಲ್ಲಿ ಭಾರತ ನಿರಂತರ ಪ್ರಯತ್ನ ನಡೆಸುತ್ತಿರುವುದು ಪಾಕಿಗೆ ಈಗ ಭಾರೀ ತಲೆನೋವು ತಂದಿಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ನಡೆಸುವ ತೆರೆಮರೆಯ ಲಾಬಿಯಿಂದ ಎಫ್‍ಎಟಿಎಫ್ ಕಪ್ಪು ಪಟ್ಟಿಗೆ ಸೇರಬಹುದಾದ ಭೀತಿ ಆವರಿಸಿದೆ ಎಂದು ಪಾಕ್ ವಿದೇಶಾಂಗ ಸಚಿವ ಖುರೇಷಿ ಈ ಹಿಂದೆಯೇ ಆತಂಕ ವ್ಯಕ್ತಪಡಿಸಿದ್ದರು.
ಬೂದು ಪಟ್ಟಿಯಲ್ಲಿ (ಗ್ರೇ ಲಿಸ್ಟ್) ಪಾಕಿಸ್ತಾನ ಮುಂದುವರಿಯುತ್ತಿರುವುದರಿಂದ ವಾರ್ಷಿಕವಾಗಿ 68 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎಂದು ಖುರೇಷಿ ತಿಳಿಸಿದ್ದಾರೆ. ಈಗ ಭಾರತ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲು ಹರಸಹಾಸ ಪಡುತ್ತಿದೆ. ಇದಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಲಾಬಿ ಮಾಡುತ್ತಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರಿದ್ದೇ ಆದಲ್ಲಿ ನಮಗೆ ಭಾರೀ ನಷ್ಟವಾಗಲಿದೆ ಎಂದು ತಿಳಿಸಿದ್ದರು.
ಆಗಿದ್ದು ಏನು?
ಪುಲ್ವಾಮಾ ದಾಳಿಯಾದ ನಂತರ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಗ್ರೇ ಪಟ್ಟಿಯಿಂದ ಹೊರಗಡೆ ಇಡಬಾರದು ಎಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಸಹ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಇರಿಸುವಂತೆ ಎಫ್‍ಎಟಿಎಫ್ ಮೇಲೆ ಒತ್ತಡ ಹಾಕಿತ್ತು.
ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ಮುಂದಿನ ಅಕ್ಟೋಬರ್ ವರೆಗೆ ಗ್ರೇ ಪಟ್ಟಿಯಲ್ಲಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಗ್ರೇ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನು ಇತರೇ ರಾಷ್ಟ್ರಗಳು ಗಂಭೀರವಾಗಿ ಸ್ವೀಕರಿಸಿರಲಿಲ್ಲ.
1989ರಲ್ಲಿ ಎಫ್‍ಎಟಿಎಫ್ ಸ್ಥಾಪಿಸಲಾಗಿದ್ದು, ಉಗ್ರರಿಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ, ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ತಡೆಯುವ ಕೆಲಸವನ್ನು ಈ ಕ್ರಿಯಾಪಡೆ ಮಾಡುತ್ತದೆ. ವಿಶ್ವದ ಒಟ್ಟು 38 ರಾಷ್ಟ್ರಗಳು ಎಫ್‍ಎಟಿಎಫ್ ಸದಸ್ಯ ರಾಷ್ಟ್ರಗಳಾಗಿವೆ. ತಾನು ನಿಗದಿಪಡಿಸಿದ ಕ್ರಮಗಳನ್ನು ಅನುಸರಿಸದೇ ಇದ್ದರೆ ಎಫ್‍ಎಟಿಎಫ್ ದೇಶಗಳನ್ನು ಗ್ರೇ ಅಥವಾ ಬ್ಲಾಕ್ ಲಿಸ್ಟ್ ಗೆ ಹಾಕುತ್ತದೆ. 2019ರ ಅಕ್ಟೋಬರ್ ಒಳಗಡೆ ಪಾಕಿಸ್ತಾನ ಎಫ್‍ಎಟಿಎಫ್ 27 ಬೇಡಿಕೆಯನ್ನು ಈಡೇರಿಸದೇ ಇದ್ದರೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಏನಿದು ಗ್ರೇ ಲಿಸ್ಟ್?
ಫುಟ್ ಬಾಲ್ ಪಂದ್ಯಗಳಲ್ಲಿ ತಪ್ಪು ಮಾಡಿದ ಆಟಗಾರಿಗೆ ಹೇಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ನೀಡುತ್ತಾರೋ ಅದೇ ರೀತಿಯಾಗಿ ರಾಷ್ಟ್ರವೊಂದಕ್ಕೆ ಮೊದಲ ಎಚ್ಚರಿಕೆ ನೀಡಲು ಈ ಪಟ್ಟಿಗೆ ಸೇರಿಸಲಾಗುತ್ತದೆ. ಗ್ರೇ ಪಟ್ಟಿಗೆ ಒಂದು ದೇಶ ಸೇರಿದರೆ ಅದಕ್ಕೆ ಹಲವು ಸಮಸ್ಯೆಗಳಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು(ಐಎಂಎಫ್, ವಿಶ್ವಬ್ಯಾಂಕ್) ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ರಾಷ್ಟ್ರಗಳು ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ರೇಟಿಂಗ್ ಕೊಡಹುದು.
ಏನಿದು ಕಪ್ಪು ಪಟ್ಟಿ?
ಎಫ್‍ಎಟಿಎಫ್ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದರೆ ಗ್ರೇ ಪಟ್ಟಿಯಲ್ಲಿರುವ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.
ಪಾಕಿಸ್ತಾನಕ್ಕೆ ಹೊಸದೆನಲ್ಲ:
ಕುತಂತ್ರಿ ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೊಸದೆನಲ್ಲ. ಈ ಹಿಂದೆ 2012 ರಿಂದ 2015 ರವರೆಗೆ ಗ್ರೇ ಪಟ್ಟಿಯಲ್ಲಿತ್ತು. ಭಾರತದ ನಿರಂತರ ಒತ್ತಡದ ಬಳಿಕ 2018ರ ಜೂನ್ ಕೊನೆಯಲ್ಲಿ ಗ್ರೇ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಲಾಗಿತ್ತು. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಪಾಕಿಸ್ತಾನ ಸಿಲುಕಿದ್ದು ವಿಶ್ವದ ರಾಷ್ಟ್ರಗಳಿಂದ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿಗೆ ಬಂದಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಈಗಾಗಲೇ ವಿವಿಧ ರಾಷ್ಟ್ರಗಳಿಂದ ಸಾಲ ಮಾಡಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟು ಡೋಲಾಯಮಾನವಾಗಬಹುದು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]