Connect with us

Bengaluru City

ಇನ್ನೂ 15 ದಿನ ಫಾಸ್ಟ್‌ಟ್ಯಾಗ್ ರೂಲ್ಸ್ ಜಾರಿ ಇಲ್ಲ

Published

on

ಬೆಂಗಳೂರು: ಇನ್ಮುಂದೆ ನೀವು ಟೋಲ್ ದಾಟುವಾಗ ಗಂಟೆಗಟ್ಲೆ ಟ್ರಾಫಿಕ್‍ ನಲ್ಲಿ ನಿಂತು ದುಡ್ಡು ಕಟ್ಟಬೇಕಾಗಿಲ್ಲ. ಹಾಗಿದ್ರೆ ಟೋಲ್‍ ನಲ್ಲಿ ಇನ್ಮುಂದೆ ಫ್ರೀ ಎಂಟ್ರಿನಾ ಅಂತ ಖುಷಿಯಾಗಬೇಡಿ. ಡಿಸೆಂಬರ್ ಒಂದರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಅಂತ ಕೇಂದ್ರ ಹೇಳಿತ್ತು. ಈಗ ಸಮಯವನ್ನ ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರಿನಂತಹ ಬೃಹತ್ ನಗರದ ಒಳಗೆ ಟ್ರಾಫಿಕ್ ಬಿಸಿಯಾದರೆ, ಹೊರಗೆ ಹೋಗ್ತಿದ್ದಾಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರೋ ಟೋಲ್‍ಗಳ ಸಮಸ್ಯೆ. ಪ್ರತಿ ಬಾರಿಯೂ ಟೋಲ್ ಕಟ್ಟಲು ಸರತಿ ಸಾಲಿನಲ್ಲಿ ನಿಂತು, ವಾಹನ ಸವಾರರು ಪರದಾಟ ಪಡಬೇಕಾಗುತ್ತದೆ. ಆದರೆ ಡಿಸೆಂಬರ್ 15ರಿಂದ ಗಂಟೆಗಟ್ಟಲೆ ನಿಲ್ಲಬೇಕಿಲ್ಲ. ಯಾಕಂದ್ರೆ ರಾಷ್ಟೀಯ ಹೆದ್ದಾರಿಯ ಎಲ್ಲಾ ಟೋಲ್ ಪಾವತಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ನೀತಿ ಜಾರಿಗೆ ತರಲು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಅದರಂತೆ ರಾಜ್ಯದ 39 ಟೋಲ್ ಪ್ಲಾಜಾಗಳಲ್ಲಿಯೂ ಫಾಸ್ಟ್ ಟ್ಯಾಗ್ ತಂತ್ರಜ್ಞಾನ ಅಳವಡಿಸಲಾಗಿದೆ.

ಭಾನುವಾರದಿಂದ್ಲೇ ಫಾಸ್ಟ್ ಟ್ಯಾಗ್ ರೂಲ್ಸ್ ಜಾರಿಗೆ ಬರಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕೊನೆ ಕ್ಷಣದಲ್ಲಿ ಈ ಗಡುವನ್ನು ಡಿಸೆಂಬರ್ 15ರವರೆಗೂ ವಿಸ್ತರಿಸಿದೆ. ಅಂದರೆ 15 ದಿನದ ಮಟ್ಟಿಗೆ ವಾಹನ ಸವಾರರಿಗೆ ರಿಲೀಫ್ ಸಿಕ್ಕಿದೆ. ಅಷ್ಟರಲ್ಲಿ ದ್ವಿಚಕ್ರ ವಾಹನ ಸವಾರರು ಎಲ್ಲಾ ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಮಾಡಿಸಿಕೊಳ್ಳೋದು ಕಡ್ಡಾಯ. ಇಲ್ಲ ಅಂದ್ರೆ ಡಬ್ಬಲ್ ಟೋಲ್ ಫೀ ಕಟ್ಟಬೇಕಾಗುತ್ತದೆ.

ಫಾಸ್ಟ್ ಟ್ಯಾಗ್ ಎಂದರೇನು?
ಫಾಸ್ಟ್ ಟ್ಯಾಗ್ ಎಂಬುದು ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದಾಗಿದೆ. ಇದನ್ನೂ ಓದಿ:  ಡಿಸೆಂಬರಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ – ಎಲ್ಲಿ ಸಿಗುತ್ತೆ? ಶುಲ್ಕ ಎಷ್ಟು? ಈ ವಿಚಾರಗಳನ್ನು ತಿಳಿದಿರಿ

ಹೇಗೆ ರಿಚಾರ್ಜ್ ಮಾಡಬೇಕು?
* ಮೊದಲು ಪ್ಲೇಸ್ಟೋರ್ ಓಪನ್ ಮಾಡಿ
* `ಮೈ ಫಾಸ್ಟ್ ಟ್ಯಾಗ್ ಆ್ಯಪ್’ ಡೌನ್‍ಲೋಡ್ ಮಾಡಿ, ಇನ್‍ಸ್ಟಾಲ್ ಮಾಡಿ
* ಕೆವೈಸಿಯನ್ನು ಅಪ್‍ಡೇಟ್ ಮಾಡಬೇಕು
* ಕ್ರೆಡಿಟ್, ಡೆಬಿಟ್ ಕಾರ್ಡ್, ಯುಪಿಐ ಮತ್ತು ಇತರೆ ಜನಪ್ರಿಯ ಪಾವತಿ ವಿಧಾನಗಳ ಮೂಲಕ ಪಾವತಿಸಿ

ಬಳಕೆ ಹೇಗೆ?:
* ಫಾಸ್ಟ್ ಟ್ಯಾಗ್ ಬಾರ್‍ಕೋಡ್‍ನ್ನು ವಾಹನದ ಮುಂಭಾಗದ ಗ್ಲಾಸ್‍ಗೆ ಅಂಟಿಸಿ
* ಈ ಫಾಸ್ಟ್ ಟ್ಯಾಗ್ ಟೋಲ್‍ನ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಸ್ಕಾನ್ ಆಗುತ್ತದೆ
* ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಟ್ ಆಗುತ್ತದೆ
* ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣವನ್ನು ಇಟ್ಟು, ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಬೇಕು.
* ನೋಂದಾಯಿತ ವಾಹನ ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿದ್ದಂತೆ ಅಲ್ಲಿನ ರೀಡರ್ ಟ್ಯಾಗನ್ನು ರೀಡ್ ಮಾಡುತ್ತದೆ.
* ಆಗ ಟೋಲ್ ಸುಂಕ ಕಡಿತವಾಗುತ್ತದೆ.

ಏನೆಲ್ಲಾ ದಾಖಲೆ ಬೇಕು?
* ಬ್ಯಾಂಕ್ ಪಾಸ್ ಬುಕ್
* ರಿಜಿಸ್ಟ್ರೇಶನ್ ಕಾರ್ಡ್ ದಾಖಲೆಗಳನ್ನು ನೀಡಬೇಕು
* ಪರಿಶೀಲನೆಗಾಗಿ ವಾಹನಗಳ ಒರಿಜಿನಲ್ ದಾಖಲೆಗಳನ್ನು ಇಟ್ಟುಕೊಳ್ಳಬೇಕು

ಸದ್ಯ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್‍ಗಳಲ್ಲಿ ಒಂದು ಲೈನ್‍ಗೆ ಮಾತ್ರ ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡಲಾಗಿದೆ. ಬಿಎಂಟಿಸಿಯ ಎಲ್ಲಾ ಬಸ್‍ಗಳಿಗೂ ಫಾಸ್ಟ್ ಟ್ಯಾಗ್ ಅಳವಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳವರೆಗೆ ದುಡ್ಡು ಕೊಟ್ಟು ಟೋಲ್‍ನಲ್ಲಿ ಹಾದು ಹೋಗಲು ಒಂದು ಲೈನ್ ಬಿಡಲಾಗುತ್ತದೆ. ಅದಾದ ಬಳಿಕ ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಸಿಸ್ಟಂ ಜಾರಿಯಾಗಲಿದೆ. ಒಟ್ಟಿನಲ್ಲಿ ಟೋಲ್ ಟ್ರಾಫಿಕ್ ಸಮಸ್ಯೆಗೆ ಗುಡ್ ಬೈ ಹೇಳಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಯೋಜನೆಗೆ ಕೈ ಹಾಕಿದೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *