ನವದೆಹಲಿ: ಟೋಲ್ (Toll) ಇರುವ ಹೆದ್ದಾರಿಯಲ್ಲಿ ನೀವು ವಾಹನ ಚಾಲನೆ ಮಾಡುತ್ತೀರಾ? ಹಾಗಾದ್ರೆ ಇನ್ನು ಮುಂದೆ ಪ್ರಯಾಣ ನಡೆಸುವ ಒಂದು ಗಂಟೆಯ ಮೊದಲು ಫಾಸ್ಟ್‌ಟ್ಯಾಗ್ (FASTag) ಸಕ್ರಿಯವಾಗಿದೆಯೋ ಇಲ್ವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.
ಹೌದು. ಕಡಿಮೆ ಬ್ಯಾಲೆನ್ಸ್, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅಥವಾ ಕಪ್ಟುಪಟ್ಟಿಗೆ (Black List) ಸೇರ್ಪಡೆಯಾದ ಫಾಸ್ಟ್‌ಟ್ಯಾಗ್‌ಗಳಿಗೆ ದಂಡ ವಿಧಿಸುವ ಈ ಹೊಸ ನಿಯಮ ಇಂದಿನಿಂದ(ಫೆ.17) ಜಾರಿಗೆ ಬಂದಿದೆ.
ರಾಷ್ಟ್ರೀಯ ಪಾವತಿ ನಿಗಮ (NPCI) ಟೋಲ್ ಸಂಗ್ರಹಕ್ಕಾಗಿ ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ ಬಳಕೆದಾರರು ದುಪ್ಪಟ್ಟು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಶವ – ಪತ್ನಿ, ಮಕ್ಕಳಿಗೆ ವಿಷ ನೀಡಿ ನೇಣಿಗೆ ವ್ಯಕ್ತಿ ಶರಣು!
ನಿಯಮ ಏನು ಬದಲಾವಣೆ?
1. ವಾಹನ ಟೋಲ್ ದಾಟುವ 60 ನಿಮಿಷ ಮೊದಲು ಮತ್ತು ಟೋಲ್ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್‌ಟ್ಯಾಗ್ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು.
2. ಕಡಿಮೆ ಬ್ಯಾಲೆನ್ಸ್ ಅಥವಾ ತಾಂತ್ರಿಕ ಸಮಸ್ಯೆಗಳಿಂದಾಗಿ ಕಪ್ಪುಪಟ್ಟಿಗೆ ಸೇರಿಸಿದ್ದರೆ ಬಳಕೆದಾರರು ತಮ್ಮ ಖಾತೆಯನ್ನು ರೀಚಾರ್ಜ್ ಮಾಡಲು 70 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
3. ಟೋಲ್‌ನಲ್ಲೇ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅವರನ್ನೇ ಹೊಣೆ ಮಾಡಲಾಗುತ್ತದೆ.
ಪಾವತಿಗಳನ್ನು ಯಾವಾಗ ತಿರಸ್ಕರಿಸಲಾಗುತ್ತದೆ?
ವಾಹನ ಟೋಲ್ ದಾಟುವ 60 ನಿಮಿಷ ಮೊದಲು ಮತ್ತು ಟೋಲ್ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್‌ಟ್ಯಾಗ್ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಆ ಫಾಸ್ಟ್‌ಟ್ಯಾಗ್ ವಹಿವಾಟು ನಿರಾಕರಿಸಲಾಗುತ್ತದೆ. ಸಕ್ರಿಯ ಆಗಿರದೇ ಇದ್ದರೆ ಟೋಲ್ ಸಿಸ್ಟಮ್‌ನಲ್ಲಿ ‘ಎರರ್ ಕೋಡ್ 176’ ಎಂದು ತೋರಿಸಲಾಗುತ್ತದೆ ಮತ್ತು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಕಪ್ಪುಪಟ್ಟಿಗೆ ಸೇರಿಸಿದ ಫಾಸ್ಟ್ಯಾಗ್‌ನೊಂದಿಗೆ ಟೋಲ್ ಪ್ರವೇಶಿಸಿದರೆ ವಾಹನ ಮಾಲೀಕರಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ.
FASTag ಕಪ್ಪುಪಟ್ಟಿಗೆ ಹೇಗೆ ಹೋಗುತ್ತೆ?
– ಸಾಕಷ್ಟು ಬ್ಯಾಲೆನ್ಸ್ ಇಲ್ಲದಿರುವುದು.
– ಟೋಲ್ ತೆರಿಗೆ ಪಾವತಿಸದಿರುವುದು.
– ಪಾವತಿ ವೈಫಲ್ಯಗಳು.
– ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ವಿವರಗಳನ್ನು ಸರಿಯಾಗಿ ನವೀಕರಣ ಮಾಡದೇ ಇರುವುದು.
– ವಾಹನದ ಚಾಸಿಸ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯಲ್ಲಿನ ವ್ಯತ್ಯಾಸ.
ಹಣ ಇಲ್ಲದೇ ಇದ್ದರೂ ಪ್ರವೇಶ:
ಒಂದು ವೇಳೆ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಅಗತ್ಯ ಹಣ ಇಲ್ಲದೇ ಇದ್ದರೂ ಟೋಲ್‌ಗೇಟ್‌ನಲ್ಲಿ ಪ್ರವೇಶ ನೀಡಲಾಗುತ್ತದೆ. ಟೋಲ್ ಪ್ರವೇಶವಾದ ಕೂಡಲೇ ‘ನಿಮ್ಮ ಖಾತೆಯಲ್ಲಿ ಅಗತ್ಯ ಹಣ ಇಲ್ಲ, ಅದನ್ನು ಕೂಡಲೇ ಭರ್ತಿ ಮಾಡಿ’ ಎಂಬ ಮೆಸೇಜ್ ಮೊಬೈಲ್‌ಗೆ ಬರುತ್ತದೆ. ಮಸೇಜ್ ಬಂದ ಬಂದ 10 ನಿಮಿಷದ ಒಳಗಡೆ ಅಗತ್ಯ ಹಣ ಹಾಕಿಕೊಂಡರೆ ಯಾವುದೇ ದಂಡ ಇರುವುದಿಲ್ಲ. ಇಲ್ಲದೇ ಇದ್ದಲ್ಲಿ ಟೋಲ್ ಶುಲ್ಕದ ಎರಡು ಪಟ್ಟು ಹಣ ಕಟ್ಟಬೇಕಾಗುತ್ತದೆ. ನೆಗೆಟಿವ್ ಬ್ಯಾಲೆನ್ಸ್ ಇದ್ದಲ್ಲಿ ಟೋಲ್ ಶುಲ್ಕವನ್ನು ಭದ್ರತಾ ಠೇವಣಿಯಿಂದ ಕಡಿತಗೊಳಿಸಲಾಗುತ್ತದೆ.
15 ದಿನದ ಬಳಿಕ ದೂರು:
ಹೆಚ್ಚುವರಿ ಹಣ ಕಡಿತ ಅಥವಾ ತಪ್ಪು ಶುಲ್ಕಕ್ಕೆ ಸಂಬಂಧಿಸಿ ಸವಾರರು 15 ದಿನಗಳ ಕೂಲಿಂಗ್ ಅವಧಿಯ ನಂತರ ಬ್ಯಾಂಕ್‌ಗಳಲ್ಲಿ ದೂರು ಸಲ್ಲಿಸಬಹುದಾಗಿದೆ.
FASTag ಬಳಕೆದಾರರಿಗೆ ಪ್ರಮುಖ ಸಲಹೆಗಳು
– FASTag ವ್ಯಾಲೆಟ್‌ನಲ್ಲಿ ಸಾಕಷ್ಟು ಹಣ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಿ, ಕನಿಷ್ಠ 100 ರೂ. ಬ್ಯಾಲೆನ್ಸ್ ಅನ್ನು ಖಚಿತಪಡಿಸಿಕೊಳ್ಳಿ.
– ಬ್ಯಾಂಕಿನಿಂದ ಬರುವ SMS ಎಚ್ಚರಿಕೆಗಳು ಮತ್ತು ಮೆಸೇಜ್‌ಗಳನ್ನು ಗಮನಿಸಿ.
– MyFASTag ಅಪ್ಲಿಕೇಶನ್ ಮೂಲಕ FASTag ಬ್ಯಾಲೆನ್ಸ್ ಮತ್ತು ಸ್ಥಿತಿಯನ್ನು ಪರಿಶೀಲಿಸಿ.
– ವಾಹನದ ವಿಂಡ್‌ಶೀಲ್ಡ್‌ನಲ್ಲಿ FASTag ಸ್ಟಿಕ್ಕರ್ ಅನ್ನು ಸರಿಯಾಗಿ ಅಂಟಿಸಿ.
– ಸಮಸ್ಯೆಗಳನ್ನು ತಡೆಗಟ್ಟಲು ಪ್ರತಿ ವಾಹನಕ್ಕೆ ಒಂದೇ FASTag ಮಾತ್ರ ಬಳಸಿ.