ಪ್ರತಿ ಸೀಸನ್‌ನಲ್ಲೂ ಪ್ರತಿಯೊಬ್ಬರೂ ಹವಾಮಾನಕ್ಕೆ ಅನುಗುಣವಾಗಿ ತಮ್ಮ ಉಡುಗೆ ತೊಡುಗೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಏಕೆಂದರೆ ಪ್ರತಿಯೊಂದು ಉಡುಗೆ ಎಲ್ಲಾ ಋತುಗಳಲ್ಲೂ ಹೊಂದಿಕೆಯಾಗುವುದಿಲ್ಲ.
ನಿಮ್ಮ ಉಡುಗೆ ತೊಡುಗೆ ಹವಾಮಾನಕ್ಕೆ ಅನುಗುಣವಾಗಿ ಬದಲಾಯಿಸುವುದರಿಂದ ನಿಮ್ಮನ್ನು ನೀವು ಯಾವುದೇ ಸೀಸನ್‌ನಲ್ಲೂ ಆರಾಮದಾಯಕವಾಗಿ ಇರಿಸುವಲ್ಲಿ ಸುಲಭವಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ದಿನನಿತ್ಯದ ಉಡುಗೆ ಕೆಲವು ಸೀಸನ್‌ಗಳಲ್ಲಿ ಕಿರಿಕಿರಿ ಎನಿಸಬಹುದು. ಇದೀಗ ಬೇಸಿಗೆ ಆರಂಭವಾಗಿದ್ದು, ಈ ಸಮಯದಲ್ಲಿ ಯಾವ ರೀತಿಯಾಗಿ ಉಡುಗೆ ತೊಡುಗೆ ಧರಿಸಬೇಕೆಂಬ ಟಿಪ್ಸ್ ಇಲ್ಲಿವೆ. ಈ ಟಿಪ್ಸ್‌ಗಳು ಯಾವುದೇ ಕಾಲಕ್ಕೂ ಹಳೆಯದೆನಿಸುವುದಿಲ್ಲ. ಬೇಸಿಗೆಯಲ್ಲಿ ನೀವು ಕಂಫರ್ಟೇಬಲ್ ಆಗಿ ಕಾಲಕಳೆಯಲು ಇಷ್ಟಪಡುತ್ತೀರಾದರೆ ಈ ಟಿಪ್ಸ್ ನಿಮಗೆ ಸಹಾಯವಾಗಲಿದೆ.
ಲೂಸ್ ಹಾಗೂ ಹಗುರ ಬಟ್ಟೆಗಳು ಬೇಸಿಗೆಗೆ ಪರ್ಫೆಕ್ಟ್:
ಬೇಸಿಗೆ ಕಾಲದಲ್ಲಿ ಹಗುರ ಹಾಗೂ ಲೂಸ್ ಬಟ್ಟೆಗಳನ್ನು ಧರಿಸುವುದು ಉತ್ತಮ. ಏಕೆಂದರೆ ಬೆಚ್ಚನೆಯ ವಾತಾವರಣದಲ್ಲಿ ದಪ್ಪ ಅಥವಾ ಉಣ್ಣೆಯಂತಹ ಬಟ್ಟೆಗಳ ಅಗತ್ಯ ಬೀಳುವುದಿಲ್ಲ. ಬಟ್ಟೆ ಹಗುರವಾಗಿದ್ದಷ್ಟು ದೇಹಕ್ಕೂ ಆರಾಮ ಎನಿಸುತ್ತದೆ. ಜೊತೆಗೆ ಶೆಕೆಯ ಅನುಭವ ಕಡಿಮೆಯೆನಿಸುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಇಂತಹ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಲು ಪ್ರಯತ್ನಿಸಿ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ
ಹಗುರವಾದ ಮೇಕಪ್ ಇರಲಿ:
ನಿಮಗೆ ಅತೀ ಮೇಕಪ್‌ನ ಅಭ್ಯಾಸವಿದೆಯೆ? ಆದರೆ ಬೇಸಿಗೆಯಲ್ಲಿ ಹೆವಿ ಮೇಕಪ್ ಬಳಕೆಯನ್ನು ಕಡಿಮೆ ಮಾಡುವುದೇ ಉತ್ತಮ. ಏಕೆಂದರೆ ಬೇಸಿಗೆಯಲ್ಲಿ ಅತಿ ಹೆಚ್ಚು ಬೆವರುವುದರಿಂದ ನಿಮ್ಮ ಮೇಕಪ್ ಕೂಡಾ ಬೆವರಿನೊಂದಿಗೆ ಕಳಚಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಇನ್ನೊಬ್ಬರ ಗಮನಕ್ಕೆ ಬಂದಲ್ಲಿ ಮುಜುಗರಕ್ಕೊಳಗಾಗಬಹುದು. ಹೀಗಾಗಿ ಆದಷ್ಟು ಲೈಟ್ ಮೇಕಪ್ ಮಾಡಿಕೊಳ್ಳುವುದು ಉತ್ತಮ.
ಗಾಢ ಬಣ್ಣದ ಬಟ್ಟೆ ಬೇಡ:
ಬೇಸಿಗೆಯಲ್ಲಿ ಗಾಢ ಬಣ್ಣದ ಬಟ್ಟೆಯನ್ನು ಧರಿಸಬಾರದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕಪ್ಪು, ನೇರಳೆ ಅಥವಾ ಯಾವುದೇ ಗಾಢ ಬಣ್ಣದ ಬಟ್ಟೆಗಳು ಸೂರ್ಯನ ಶಾಖವನ್ನು ಹೀರಿಕೊಳ್ಳುತ್ತದೆ. ಇದರಿಂದ ನೀವು ಸಾಮಾನ್ಯಕ್ಕಿಂತಲೂ ಹೆಚ್ಚು ಬೆವರುವ ಸಾಧ್ಯತೆ ಇರುತ್ತದೆ. ಹೀಗಾಗಿ ತಿಳಿ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಹೆಚ್ಚು ಹೆಚ್ಚು ಬಳಸಿ. ಇದು ಬೇಸಿಗೆಯಲ್ಲೂ ತಂಪಾಗಿಡಲು ಸಹಕಾರಿಯಾಗುತ್ತದೆ. ಇದನ್ನೂ ಓದಿ: ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು
ಸ್ಲೀವ್ ಲೆಸ್ ಅಥವಾ ಬಲೂನ್ ಸ್ಲೀವ್ಸ್‌ನ ಬಟ್ಟೆ ಉತ್ತಮ:
ಬೇಸಿಗೆಯಲ್ಲಿ ಬೆವರುವುದು ಸಹಜ. ನೀವು ಉದ್ದನೆಯ ತೋಳಿನ ಬಟ್ಟೆ ಧರಿಸಿದಾಗ ಕಂಕುಳದ ಬೆವರು ಬಟ್ಟೆಗೆ ಅಂಟಿ ಮುಜುಗರವಾಗುವಂತೆ ಮಾಡುತ್ತದೆ. ಹೀಗಾಗಿ ಬೇಸಿಗೆ ಸಮಯದಲ್ಲಿ ಸ್ಲೀವ್‌ಲೆಸ್ ದಿರಿಸನ್ನು ಬಳಸುವುದು ಸೂಕ್ತವೆನಿಸುತ್ತದೆ. ಆದರೆ ಕೆಲವರು ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸಲು ಇಷ್ಟ ಪಡುವುದಿಲ್ಲ. ಹೀಗಿರುವಾಗ ಬಲೂನ್ ಸ್ಲೀವ್ಸ್ ಇರುವ ಬಟ್ಟೆಗಳನ್ನು ಟ್ರೈ ಮಾಡಬಹುದು. ಇವು ಶೆಕೆಯ ಅನುಭವ ಕಡಿಮೆ ಮಾಡುವುದಲ್ಲದೇ ದೇಹವನ್ನು ಕೂಲ್ ಆಗಿಡಲು ಸಹಾಯ ಮಾಡುತ್ತದೆ.
ಬಿಸಿಲಿಗೆ ಹೋಗುವಾಗ ಸನ್‌ಗ್ಲಾಸ್, ಟೋಪಿ ಅಗತ್ಯ:
ನೀವು ಬೇಸಿಗೆ ಬಿಸಿಲಿನಲ್ಲಿ ಹೊರಗಡೆ ಹೋಗುತ್ತಿದ್ದೀರಾದರೆ ಟೊಪಿ ಹಾಗೂ ಸನ್‌ಗ್ಲಾಸ್ ಬಳಸುವುದು ಉತ್ತಮವಾಗುತ್ತದೆ. ಇವು ಸೂರ್ಯನ ಕಿರಣಗಳಂದ ರಕ್ಷಿಸುವುದಲ್ಲದೇ ಟ್ಯಾನ್ ಆಗುವುದನ್ನು ತಪ್ಪಿಸುತ್ತದೆ. ಬೇಸಿಗೆ ಕಾಲಕ್ಕಾಗಿಯೇ ನೀವು ಒಂದು ಜೊತೆ ಟೋಪಿ ಹಾಗೂ ಸನ್ ಗ್ಲಾಸ್‌ಗಳನ್ನು ತೆಗೆದಿಡಿ. ನಿಮ್ಮ ಟೇಸ್ಟ್ಗೆ ತಕ್ಕಂತಹ ಟೋಪಿ ಖರೀದಿ ಮಾಡಿ ಬಿಸಿಲಿನ ಸಮಯದಲ್ಲಿ ಹೊರಗಡೆ ಹೋಗುವಾಗ ಧರಿಸಿ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು