ನವದೆಹಲಿ: ಮಂಗಳ ಸೂತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ಖಂಡಿಸಿದ್ದಾರೆ.
ಈ ಸಂಬಂಧ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಲ್ಲಾ (Allah) ಮತ್ತು ಇಸ್ಲಾಂ (Islam) ನಮಗೆ ಎಲ್ಲರೊಂದಿಗೆ ಒಟ್ಟಾಗಿ ಸಾಗಲು ಕಲಿಸಿದೆ. ನಮ್ಮ ಧರ್ಮವು ನಮಗೆ ಇತರ ಧರ್ಮಗಳನ್ನು ಕೀಳಾಗಿ ಕಾಣುವುದನ್ನು ಕಲಿಸಿಲ್ಲ, ಬದಲಿಗೆ ಯಾವಾಗಲೂ ಇತರ ಧರ್ಮಗಳನ್ನು ಗೌರವಿಸಲು ಕಲಿಸಿದೆ. ಒಬ್ಬ ವ್ಯಕ್ತಿಯು ಮಂಗಳಸೂತ್ರವನ್ನು ಕಿತ್ತುಕೊಂಡರೆ ಅವನು ಮುಸ್ಲಿಮನಲ್ಲ ಎಂದು ವಾಗ್ದಾಳಿ ನಡೆಸಿದರು.
2024ರ ಲೋಕಸಭಾ ಚುನಾವಣೆಗೆ (Loksabha Elections 2024) ಮುನ್ನ ಭಾನುವಾರ ಬನ್ಸ್ವಾರಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳೋದು ಅಪರಾಧ: ಬೆಂಗ್ಳೂರಿನ ಹಲ್ಲೆ ಪ್ರಸ್ತಾಪಿಸಿ ಮೋದಿ ಕಿಡಿ
ಇದೇ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಅಲ್ಪಸಂಖ್ಯಾತ ಸಮುದಾಯ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿತ್ತು. ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಮಂಗಳಸೂತ್ರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ನೀಡಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಮೋದಿ ಗಂಭೀರ ಆರೋಪ ಮಾಡಿದ್ದರು.