ಬೆಳಗಾವಿ: ರಾಸಾಯನಿಕ ಬಳಸಿ ನಮ್ಮ ಭೂಮಿಯನ್ನು ನಾವೇ ಹಾಳು ಮಾಡುತ್ತಿದ್ದೇವೆ ಎಂದು ಹೇಳಿದ ಕೃಷಿ ಇಲಾಖೆ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ರಾಸಾಯನಿಕ ಬಳಿಸೋದು ಕಡಿಮೆ ಮಾಡಬೇಕು ಎಂದು ಅಧಿಕಾರಿಗಳು ರೈತರಿಗೆ ಹೇಳಿದ್ದಾರೆ. ಈ ವೇಳೆ ರೈತರು ನೀವೇ ಯೂರಿಯಾ ಡಿಎಪಿ ತಯಾರು ಮಾಡಿ ಸಬ್ಸಿಡಿ ದರದಲ್ಲಿ ಕೊಡುತ್ತೀರಾ. ಮತ್ತೆ ತಪ್ಪನ್ನೆಲ್ಲ ನಮ್ಮ ಮೇಲೆ ಹಾಕುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹುಕ್ಕೇರಿ ಇಂಚಿಗೇರಿ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹಾಗೂ ಕೃಷಿ ಅಧಿಕಾರಿಗಳು ಭಾಷಣದಲ್ಲಿ ರೈತರು ರಾಸಾಯನಿಕ ಬಳಿಸಿ ಭೂಮಿ ಹಾಳಾಗುತ್ತಿದೆ ಎಂದು ಹೇಳಿದ್ದರು. ಇದರಿಂದ ಕೆರಳಿದ ರೈತರು ನಮ್ಮ ಮೇಲೆ ಯಾಕೆ ನೀವು ತಪ್ಪು ಹೊರಿಸುತ್ತೀರಾ ಎಂದು ತರಾಟೆಗೆ ತೆಗದುಕೊಂಡರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹುಕ್ಕೇರಿಯ ಇಂಚಿಗೇರಿ ಮಠದ ಅಭಿನವ ಮಂಜುನಾಥ ಸ್ವಾಮೀಜಿ, ರೈತರು ಸರ್ಕಾರಗಳಲ್ಲಿ ಸಾಲಮನ್ನಾ ಮಾಡಿ ಎಂದು ಬೇಡುವುದನ್ನು ಬಿಟ್ಟು ದೇವರಲ್ಲಿ ಕಾಲಕ್ಕೆ ತಕ್ಕಂತೆ ಮಳೆ, ಕಾಲಕ್ಕೆ ತಕ್ಕಂತೆ ಬೆಳೆ, ಕಾಲಕ್ಕೆ ತಕ್ಕಂತೆ ಬೆಲೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಬೇಕು ಎಂದರು.
ಭಾರತ ದೇಶ ರೈತರ ಕೈಯಲ್ಲಿದೆ. ನಮ್ಮ ದೇಶದ ರೈತರು ಉಳುಮೆ ಮಾಡುವುದನ್ನು ಬಿಟ್ಟರೆ ಇಡೀ ವ್ಯವಸ್ಥೆಯಲ್ಲೇ ಅಲ್ಲೋಲ ಕಲ್ಲೋಲವಾಗುತ್ತೆ. ಇಂದಿನ ದಿನಮಾನಗಳಲ್ಲಿ ರಾಸಾಯನಿಕಗಳನ್ನು ಬಳಸಿ ಭೂಮಿ ತಾಯಿಯನ್ನು ಬಂಜರು ಮಾಡಲಾಗುತ್ತಿದೆ. ರೈತರು ರಾಸಾಯನಿಕಗಳನ್ನು ಬಳಸುವುದನ್ನು ಸಾಯುವವ ಕೃಷಿಯತ್ತ ಹೆಚ್ಚು ತೊಡಗಿಕೊಳ್ಳಿವಂತೆ ಸ್ವಾಮೀಜಿ ರೈತರಿಗೆ ಕರೆ ಕೊಟ್ಟರು. ಕೃಷಿ ಅಭಿಯಾನದಲ್ಲಿ ನೂರಾರು ರೈತರು ಭಾಗವಹಿಸಿ ಹೊಸ ಹೊಸ ಕೃಷಿ ಚಟುವಟಿಕೆಗಳ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕೃಷಿ ತಜ್ಜರು ರೈತರಿಗೆ ಕೃಷಿಯಲ್ಲಿ ನೂತನ ತಂತ್ರಾಶಗಳನ್ನು ಬಳಸಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಹುಕ್ಕೇರಿ ವಿರಕ್ತ ಮಠದ ಶಿವ ಬಸವ ಸ್ವಾಮೀಜಿ ವಹಿಸಿದ್ದರು. ಕೃಷಿ ಇಲಾಖೆಯ ಸಹ ನಿರ್ದೇಶಕ ಎಂ ಎಸ್ ಪಟಗುಂದಿ, ಕೃಷಿ ಅಧಿಕಾರಿ ಎ.ಕೆ ಬಡಿಗೇರ ಸೇರಿದಂತೆ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.