ಕೋಲಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚೆನ್ನೈನಲ್ಲಿ ಅಪ್ಪಳಿಸಿರುವ ಓಖಿ ಚಂಡಮಾರುತದ ಎಫೆಕ್ಟ್ ನಿಂದ ಗಡಿ ಜಿಲ್ಲೆ ಕೋಲಾರದ ರೈತರು ಆತಂಕ ಎದುರಿಸುವಂತಾಗಿದೆ.
ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ರಾಗಿ ಕಟಾವು ಮಾಡಿ ರಾಶಿ ಪೂಜೆ ಮಾಡಬೇಕೆಂದಿದ್ದ ರೈತನಿಗೆ ಓಖಿ ಚಂಡಮಾರುತ ಆತಂಕ ತಂದೊಡ್ಡಿದೆ. ಕೋಲಾರ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು, ಬೆಂಬಿಡದೆ ತುಂತುರು ಮಳೆ ಸುರಿಯುತ್ತಿದೆ. ಪರಿಣಾಮ ಕೋಲಾರ ಜಿಲ್ಲೆಯ ರೈತರು ಆತಂಕಕ್ಕೊಳಗಾಗಿದ್ದಾರೆ.
Advertisement
Advertisement
ಈ ಬಾರಿ ಮುಂಗಾರು ಉತ್ತಮ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಒಳ್ಳೆಯ ರಾಗಿ ಬೆಳೆಯಾಗಿತ್ತು. ಕೋಟ್ಯಾಂತರ ರೂಪಾಯಿ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರು ರಾಗಿ ಪೈರು ಕಟಾವು ಮಾಡುವ ಹಾಗೂ ಕಟಾವು ಮಾಡಿದ ರಾಗಿ ತೆನೆಯನ್ನ ಒಕ್ಕಣೆ ಮಾಡುವ ಕೆಲಸದಲ್ಲಿ ತೊಡಗಿದ್ದರು. ಹೀಗಿರುವಾಗಲೇ ಓಖಿ ಚಂಡಮಾರುತದ ಎಫೆಕ್ಟ್ ರಾಗಿ ಪೈರೆಲ್ಲಾ ನೆಲ ಕಚ್ಚಿ ಹಾಳಾಗುವಂತೆ ಮಾಡಿದೆ. ಅಲ್ಲದೇ ಒಕ್ಕಣೆಗೆ ಸಿದ್ಧಮಾಡಿಕೊಂಡಿದ್ದ ರೈತರ ರಾಗಿ ತೆನೆ ಮಳೆಯಲ್ಲಿ ನೆನದು ರಾಗಿ ಹಾಳಾಗಿದೆ, ಇದರಿಂದ ಕೋಲಾರದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.
Advertisement
ಮಳೆ ಇನ್ನು ಮೂರು ದಿನಗಳ ಕಾಲ ಮುಂದುವರೆಯುವ ಹಿನ್ನೆಲೆಯಲ್ಲಿ ರಾಗಿ ಬೆಳೆ ಮಳೆಯಲ್ಲಿ ನೆನೆದು ಮೊಳಕೆ ಹೊಡೆಯಲಾರಂಭಿಸುತ್ತದೆ ಎನ್ನುವ ಆತಂಕ ಕೂಡಾ ರೈತರಲ್ಲಿದೆ. ಅಲ್ಲದೆ ಅವರೆ ಹಾಗೂ ತೊಗರಿ ಬೆಳೆಯೂ ಸಹ ಹೂವು ಬಿಟ್ಟಿದ್ದರಿಂದ ಹೂವೆಲ್ಲಾ ಉದುರಿಹೋಗುತ್ತದೆ ಅನ್ನೊ ಅಳಲು ರೈತರದ್ದು. ಸಣ್ಣದಾಗಿ ಸುರಿಯುತ್ತಿರುವ ಜಡಿ ಮಳೆಯೇ ಆದರೂ ಇದರಿಂದ ರೈತರಿಗೆ ಅಗುತ್ತಿರುವ ಹಾನಿ ಮಾತ್ರ ಅಪಾರ ಪ್ರಮಾಣದ್ದಾಗಿದೆ.