Connect with us

ಹಾವೇರಿ: ಜಮೀನಿನಲ್ಲಿ ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ

ಹಾವೇರಿ: ಜಮೀನಿನಲ್ಲಿ ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ

– ಸಾಲಗಾರರ ಕಾಟಕ್ಕೆ ಬೇಸತ್ತು ರಾಯಚೂರಿನ ರೈತ ಆತ್ಮಹತ್ಯೆಗೆ ಶರಣು
– ಚಿಕ್ಕಬಳ್ಳಾಪುರದಲ್ಲಿ ಜಮೀನು ವಿವಾದದಿಂದ ಮನನೊಂದ ವ್ಯಕ್ತಿ ಆತ್ಮಹತ್ಯೆ

ಹಾವೇರಿ/ರಾಯಚೂರು/ಚಿಕ್ಕಬಳ್ಳಾಪುರ: ಸಾಲಬಾಧೆ ತಾಳಲಾರದೆ ತನ್ನ ಜಮೀನಿನಲ್ಲಿರೋ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ನಡೆದಿದೆ.

ಮೃತ ರೈತನನ್ನ 50 ವರ್ಷ ದ ಉಜ್ಜನಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಐದು ಎಕರೆ ಜಮೀನು ಹೊಂದಿದ್ದ ರೈತ ಉಜ್ಜನಗೌಡ, ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಮತ್ತು ಮೆಕ್ಕೆಜೋಳದ ಬೆಳೆ ಸಂಪೂರ್ಣ ಹಾಳಾಗಿದ್ದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಟ್ರ್ಯಾಕ್ಟರ್ ಸಾಲ, ಬೆಳೆಸಾಲ ಸೇರಿದಂತೆ ರೈತ 10 ಲಕ್ಷ ರೂಪಾಯಿ ಸಾಲಮಾಡಿಕೊಂಡಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಸಾಲಗಾರರ ಕಾಟ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 31 ವರ್ಷದ ನಾಗೇಶ್ ನೇಣಿಗೆ ಶರಣಾದ ರೈತ. 5 ಲಕ್ಷ ರೂ. ಖಾಸಗಿ ಸಾಲ ಮಾಡಿಕೊಂಡಿದ್ದ ನಾಗೇಶ್, ಕಳೆದ ಎರಡು ವರ್ಷಗಳಿಂದ ಕೈಗೆ ಬೆಳೆ ಬಾರದ ಹಿನ್ನೆಲೆಯ್ಲಲಿ ಸಾಲದ ಹೊರೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿದಿನ ಮನೆಗೆ ಬರುತ್ತಿದ್ದ ಸಾಲಗಾರರ ಕಾಟ ತಾಳಲಾರದೆ ನೊಂದು ರಾತ್ರಿ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸತತ ಬರಗಾಲದಿಂದಾಗಿ ತನ್ನ ಎರಡು ಎಕರೆ ಹೊಲದಲ್ಲಿ ಬೆಳೆದ ಬೆಳೆ ನಷ್ಟವಾಗಿದ್ದರಿಂದ ಬೇರೆ ದಾರಿ ಕಾಣದೆ ನಾಗೇಶ್ ಸಾವಿನ ನಿರ್ಧಾರಕ್ಕೆ ಬಂದಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಜಮೀನು ವಿವಾದದಿಂದ ಮನನೊಂದ ವ್ಯಕ್ತಿಯೊರ್ವ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅರಲಹಳ್ಳಿ ಗ್ರಾಮದ 38 ವರ್ಷದ ದೇವರಾಜ್ ಮನೆಯ ಪಕ್ಕದಲ್ಲಿನ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ದೇವರಾಜ್ ಹಾಗೂ ಅವರ ತಮ್ಮನ ನಡುವೆ ಜಮೀನು ವಿವಾದ ಇದ್ದು ಬಹಳಷ್ಟು ಬಾರಿ ರಾಜಿ ಪಂಚಾಯತಿ ಮಾಡಲಾಗಿತ್ತು ಎನ್ನಲಾಗಿದೆ. ಆದ್ರೆ ವಿವಾದ ಬಗೆಹರಿಯದ ಕಾರಣ ನನ್ನ ಸಾವಿಗೆ ತಮ್ಮ ಹಾಗೂ ಆತನ ಪತ್ನಿ ಕಾರಣ ಅಂತ ಡೆತ್‍ನೋಟ್ ಬರೆದು ದೇವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ.